ಇ-ಸಿಗರೇಟ್‍ಗಳ ದುಷ್ಪರಿಣಾಮಗಳನ್ನು ತಡೆಗಟ್ಟಲು ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ, ಸೆ.19- ಧೂಮಪಾನಕ್ಕೆ ಪರ್ಯಾಯವಾದ ಮಾರಕ ಎಲೆಕ್ಟ್ರಾನಿಕ್ ಸಿಗರೇಟ್‍ಗಳ(ಇ-ಸಿಗರೇಟ್‍ಗಳ) ದುಷ್ಪರಿಣಾಮಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಇಂದು ಸುಗ್ರೀವಾಜ್ಞೆ ಹೊರಡಿಸಿದೆ.

ಈ ಸುಗ್ರೀವಾಜ್ಞೆಯ ಅನ್ವಯ ಎಲೆಕ್ಟ್ರಾನಿಕ್ ಸಿಗರೇಟ್‍ಗಳು ಮತ್ತು ಅದಕ್ಕೆ ಸಂಬಂಧಪಟ್ಟ ವಸ್ತುಗಳ ಉತ್ಪಾದನೆ, ರಫ್ತು, ಆಮದು, ಸಾಗಣೆ, ದಾಸ್ತಾನು ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಿನ್ನೆ ಸಂಜೆ ನಡೆಯಲಿರುವ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಇ-ಸಿಗರೇಟ್ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧಾರ ಕೈಗೊಳ್ಳಲಾಯಿತು.

ಈ ಸಂಬಂಧ ರೂಪಿಸಲಾಗಿರುವ ಇ-ಸಿಗರೇಟ್‍ಗಳ ನಿಷೇಧ ಸುಗ್ರೀವಾಜ್ಞೆ, 2019 ಕಟ್ಟಳೆಯನ್ನು ಪ್ರಧಾನಮಂತ್ರಿ ಕಾರ್ಯಾಲಯದ ನಿರ್ದೇಶನದ ಹಿನ್ನಲೆಯಲ್ಲಿ ಸಚಿವರ ಸಮೂಹ (ಜಿಒಎಂ) ಪರಾಮರ್ಶೆ ನಡೆಸಿ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಒಪ್ಪಿಗೆ ಸೂಚಿಸಿತ್ತು.

ಕರಡು ಅಧಿಸೂಚನೆಯಲ್ಲಿ ಮೊದಲ ಬಾರಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಕನಿಷ್ಠ ಒಂದು ವರ್ಷ ಸೆರೆವಾಸ ಮತ್ತು ಒಂದು ಲಕ್ಷ ರೂ.ಗಳ ದಂಡ ವಿಧಿಸಲು ಆರೋಗ್ಯ ಸಚಿವಾಲಯ ಉದ್ದೇಶಿಸಿದೆ. ಅಲ್ಲದೇ ಪುನರಾವರ್ತಿತ ಉಲ್ಲಂಘನೆಗಳಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳ ಜುಲ್ಮಾನೆ ವಿಧಿಸಲು ನಿರ್ಧರಿಸಲಾಗಿದೆ.

ಅಲ್ಲದೆ ಇ-ಸಿಗರೇಟ್ ಮತ್ತು ಇತರ ಪರ್ಯಾಯ ವಸ್ತುಗಳನ್ನು ಸಂಗ್ರಹಿಸುವವರಿಗೆ 50ಸಾವಿರ ದಂಡ ಮತ್ತು 6ತಿಂಗಳ ಕಾರಾಗೃಹ ಶಿಕ್ಷೆ ಅಥವಾ ಇವೆರಡನ್ನು ವಿಧಿಸಲು ಅವಕಾಶವಿದೆ.

ಇ-ಸಿಗರೇಟ್, ಹೀಟ್-ನಾಟ್-ಬರ್ನ್ ಸ್ಮೋಕಿಂಗ್ ಸಾಧನಗಳು, ವೇಪ್ ಮತ್ತು ಇ-ನಿಕೋಟಿನ್ ಸ್ವಾದದ ಹುಕ್ಕಾ ಇತ್ಯಾದಿಯಂಥ ಇ-ಸಿಗರೇಟ್‍ಗಳ ಪರ್ಯಾಯ ಧೂಮಪಾನ ವಸ್ತುಗಳನ್ನು ನಿಷೇಧಿಸುವುದು ಮೋದಿ ಸರ್ಕಾರದ ಪ್ರಥಮ 100 ದಿನಗಳ ಕಾರ್ಯಸೂಚಿಯಾಗಿತ್ತು.

ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿದ್ದು, ಮುಂದಿನ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಅವಕಾಶವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ