ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೂವಾರಿಗಳ ಕಡೆಗಣನೆ

ಬೆಂಗಳೂರು,ಸೆ.19- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ನಡೆಸಿದ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೂವಾರಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಆಪರೇಷನ್ ಕಮಲದ ಸೂತ್ರಧಾರರನ್ನು ದೂರವಿಟ್ಟಿರುವುದು ಪಕ್ಷದೊಳಗೆ ಅಸಮಾಧಾನ ಮೂಡಿಸಿದೆ.

ಮಾಜಿ ಸಚಿವ ಹಾಗೂ ಮಹದೇವಪುರದ ಕ್ಷೇತ್ರದ ಶಾಸಕ ಅರವಿಂದಲಿಂಬಾವಳಿ, ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಕೆಲವು ಪ್ರಮುಖರು ಶಾಸಕರನ್ನು ಸೆಳೆಯಲು ಭಾರೀ ಕಸರತ್ತು ನಡೆಸಿದರು.

ಹಲವು ಬಾರಿ ಆಪರೇಷನ್ ಕಮಲ ವಿಫಲವಾದರೂ ಪಟ್ಟು ಬಿಡದ ಇವರು ಲೋಕಸಭೆ ಚುನಾವಣೆ ಬಳಿಕ ದೋಸ್ತಿ ಸರ್ಕಾರದಲ್ಲಿ  ಅಸಮಾಧಾನಗೊಂಡಿದ್ದ ಶಾಸಕರನ್ನು  ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಪರೇಷನ್ ಕಮಲದ ಕಿಂಗ್‍ಪಿನ್‍ಗಳೆಂದೇ ಉಪಮುಖ್ಯಮಂತ್ರಿ ಡಾ.ಅಶ್ವಥ್‍ನಾರಾಯಣ್, ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿ ಮತ್ತಿತರರು ನೇತೃತ್ವ ವಹಿಸಿದ್ದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಇವರೆಲ್ಲರಿಗೂ ಸಂಪುಟದಲ್ಲಿ ಸೂಕ್ತವಾದ ಸ್ಥಾನಮಾನ ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಹೀಗಾಗಿಯೇ ಈ ತ್ರಿಮೂರ್ತಿಗಳು ಆಪರೇಷನ್ ಕಮಲದ ಮಂಚೂಣಿಯಲ್ಲಿದ್ದರು.

ಸರ್ಕಾರ ರಚನೆಯಾದ ಬಳಿಕ ಮಲ್ಲೇಶ್ವರಂನ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣದಂತಹ ಪ್ರಬಲ ಖಾತೆಯನ್ನು ಪಡೆಯುವಲ್ಲಿ ಯಶಸ್ವಿಯಾದರು.

ಆದರೆ ಅರವಿಂದ್ ಲಿಂಬಾವಳಿ ಮತ್ತು ಸಿ.ಪಿ.ಯೋಗೇಶ್ವರ್ ಅವರುಗಳನ್ನು ಯಡಿಯೂರಪ್ಪ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎನ್ನಲಾಗುತ್ತಿದೆ.

ಅದರಲ್ಲೂ ಲಿಂಬಾವಳಿ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರು. ಸಹಜವಾಗಿ ಅವರಿಗೆ ಸಂಪುಟದಲ್ಲಿ ಉನ್ನತ ಸ್ಥಾನಮಾನ ಸಿಕ್ಕೇ ಸಿಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದಾಗ ಕಡೆಪಕ್ಷ ಅವರನ್ನು ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂಬ ವದಂತಿ ಹಬ್ಬಿತ್ತು. ಯಡಿಯೂರಪ್ಪ ಕೂಡ ಅವರ ಪರವಾಗಿಯೇ ಇದ್ದಾರೆ. ಹೀಗಾಗಿಯೇ ಸಚಿವ ಸ್ಥಾನ ಕೈ ತಪ್ಪಿದೆ ಎನ್ನಲಾಗಿತ್ತು.

ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವಾಗ ಕೇಂದ್ರ ವರಿಷ್ಠರು ಯಡಿಯೂರಪ್ಪನವರ ಮಾತನ್ನು ಕೂಡ ಕೇಳದೆ ನೇರವಾಗಿ ಮಂಗಳೂರು ಸಂಸದ ನಳಿನ್‍ಕುಮಾರ್ ಕಟೀಲ್‍ಗೆ ಪಟ್ಟ ಕಟ್ಟಿದರು.

ನಿಮಗೆ ಸೂಕ್ತವಾದ ಸ್ಥಾನಮಾನ ನೀಡಲಾಗುವುದು ಎಂದು ಇವರೆಲ್ಲರಿಗೂ ಯಡಿಯೂರಪ್ಪ ಹೇಳಿದ್ದರಾದರೂ ಆ ಭರವಸೆ ಕಾಗದದ ಮೇಲೆಯೇ ಉಳಿದಿದೆ ಹೊರತು ಈವರೆಗೂ ಈಡೇರಿಲ್ಲ.

ಹೀಗಾಗಿಯೇ  ಲಿಂಬಾವಳಿ, ಸಿ.ಪಿ.ಯೋಗೇಶ್ವರ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಸೇರಿದಂತೆ ಅನೇಕರು ಯಡಿಯೂರಪ್ಪನವರ ನಡವಳಿಕೆ ವಿರುದ್ದ ಅಸಮಾಧಾನಗೊಂಡಿದ್ದಾರೆ.

ಅಧಿಕಾರಕ್ಕೆ ಬರುವ ಮುನ್ನ ಇದ್ದ ರೀತಿ ಬಿಎಸ್‍ವೈ ಮುಖ್ಯಮಂತ್ರಿಯಾದ ಮೇಲೆ ಬದಲಾಗಿದ್ದಾರೆ. ಈಗ ಅವರ ಅಕ್ಕಪಕ್ಕ ಹಿತ್ತಾಳೆ ಕಿವಿಯವರೇ ಸೇರಿಕೊಂಡಿದ್ದಾರೆ. ಅನ್ಯ ಪಕ್ಷಗಳ ಶಾಸಕರನ್ನು ಕರೆತರುವಾಗ ನಾವು ಬೇಕಿತ್ತು. ಅಧಿಕಾರಕ್ಕೆ ಬಂದ ನಂತರ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅನೇಕರು ನೋವು ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮನ್ನು ನಾನು ಕೈಬಿಡುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಸ್ಥಾನಮಾನ ನೀಡುತ್ತೇನೆ ಎಂದು ಬಿಎಸ್‍ವೈ ಭರವಸೆಯನ್ನು ಕೊಡುತ್ತಿದ್ದರಾದರೂ ಇವರ್ಯಾರು ನಂಬುವ ಸ್ಥಿತಿಯಲ್ಲಿಲ್ಲ.

ಹೀಗಾಗಿಯೇ ಕಳೆದ ಹಲವು ದಿನಗಳಿಂದ ಈ ಎಲ್ಲರೂ ಯಡಿಯೂರಪ್ಪನವರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿಲ್ಲ. ಅತ್ತ ಡಾಲರ್ಸ್ ಕಾಲೋನಿ ನಿವಾಸದತ್ತ ತಲೆಯನ್ನೂ ಹಾಕಿಲ್ಲ.

ಮೂಲಗಳ ಪ್ರಕಾರ ಅರವಿಂದ್ ಲಿಂಬಾವಳಿ ಮತ್ತು ಸಿ.ಪಿ.ಯೋಗೇಶ್ವರ್ ಅಸಮಾಧಾನಗೊಂಡು ಬಿಎಸ್‍ವೈ ಬಣದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ