ಬಳ್ಳಾರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ತಿಂಗಳಿಗೊಮ್ಮೆ ವಾಸ್ತವ್ಯ ಮಾಡುತ್ತೇನೆ. ಶೀಘ್ರದಲ್ಲಿ ಆಸ್ಪತ್ರೆ ವಾಸ್ತವ್ಯ ಮಾಡಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಆಸ್ಪತ್ರೆ ವಾಸ್ತವ್ಯ ಆರಂಭಿಸುತ್ತೇನೆ. ತಿಂಗಳಿಗೊಮ್ಮೆ ರಾಜ್ಯಾದ್ಯಂತ ಪ್ರವಾಸ ಹೋದಾಗ ಐಬಿಯಲ್ಲಿರುವ ಬದಲು ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡುವೆ ಎಂದರು.
ಹಂಪಿ ಉತ್ಸವ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ ಅಧಿಕಾರಿಗಳು, ಶಾಸಕರ ಸಭೆ ಕರೆದು ದಿನಾಂಕ ನಿಗದಿ ಮಾಡಲಾಗುವುದು. ಈ ಕುರಿತು ಸಿಎಂ ಜೊತೆ ಮಾತನಾಡಲಾಗುವುದು. ಮೈಸೂರು ದಸರಾದಂತೆ ಹಂಪಿ ಉತ್ಸವಕ್ಕೂ ನಿರ್ದಿಷ್ಟ ದಿನಾಂಕ ನಿಗದಿಪಡಿಸುವೆ ಎಂದು ಹೇಳಿದರು.
ಇದೇ ವೇಳೆ, ಆರೋಗ್ಯ ಸಚಿವ ರಾಮುಲು ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದರು. ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಗಡುವು ನೀಡುವೆ. ಹದಿನೈದು ದಿನಗಳ ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು. ಆಸ್ಪತ್ರೆಯ ಸೇವೆಗಳನ್ನು ನೀಡುವ ವಿಚಾರದಲ್ಲಿ ತಾಂತ್ರಿಕ ತೊಂದರೆ ನೆಪ ಹೇಳಬಾರದು. ಸೇವೆ ಒದಗಿಸುವಲ್ಲಿ ಏನೇ ಲೋಪ ಇದ್ದರೂ ಅದನ್ನು ಸರಿಪಡಿಸುವ ಜವಾಬ್ದಾರಿ ಸಂಬಂಧಿಸಿದವರದ್ದೇ ಆಗಿದೆ ಎಂದು ಸೂಚಿಸಿದರು.
ಕಲಬುರ್ಗಿ ಡಯಾಲಿಸಿಸ್ ಘಟಕದಲ್ಲಿ ಬಾಲಕನ ಸಾವಿನ ಪ್ರಕರಣ ಕುರಿತು, ಈಗಾಗಲೇ ನಾನು ವರದಿ ಕೇಳಿರುವೆ. ಒಂದುವೇಳೆ ಡಿಎಚ್ ಓ – ಡಿಎಸ್ ಕರ್ತವ್ಯ ಲೋಪ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳುವೆ ಎಂದರು.
ಬಳ್ಳಾರಿಯ ವಿಮ್ಸ್ ನ ಸಮಸ್ಯೆ ಬಗೆಹರಿಸುವೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಇದಕ್ಕೆ ನಾನು ಬದ್ಧನಾಗಿರುವೆ ಎಂದು ರಾಮುಲು ಹೇಳಿದರು.