ಬೆಂಗಳೂರು: ನನಗೆ ಏಳೆಂಟು ತಿಂಗಳು ಸಮಯ ಕೊಡಿ, ಬೆಂಗಳೂರು ನಗರ ಚಿತ್ರಣವನ್ನೇ ಬದಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಎಫ್ ಕೆ ಸಿ ಸಿ ಐ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಏಳೆಂಟು ತಿಂಗಳಲ್ಲಿ ಬೆಂಗಳೂರು ನಗರವನ್ನು ವಿಶ್ವದರ್ಜೆಗೆಯಲ್ಲಿ ಅಭಿವೃದ್ಧಿ ಪಡಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಫೆರಿಫೆರಿಯಲ್ ರಿಂಗ್ ರೋಡ್, ಸಬರ್ಬನ್ ರೈಲ್ವೆ ಸೇರಿದಂತೆ ಎಲ್ಲಾ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಫುಟ್ ಪಾತ್, ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳಿವೆ. ಕಸ ವಿಲೇವಾರಿ ನಗರದ ಬಹುದೊಡ್ಡ ಸಮಸ್ಯೆಯಾಗಿದೆ. ನಗರದ ಕೆರೆಗಳ ಸ್ವಚ್ಚತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ರೋರೀಚ್ ಎಸ್ಟೇಟ್ ನಲ್ಲಿ ಫಿಲಂ ಸಿ.ಟಿ ನಿರ್ಮಾಣದ ಕುರಿತಾಗಿಯೂ ಚಿಂತನೆ ನಡೆದಿದೆ ಎಂದಿದ್ದಾರೆ. ಅಲ್ಲದೆ, ಬೆಂಗಳೂರು ಅಭಿವೃದ್ಧಿಗೆ 12 ಹೈಡೆನ್ಸಿಟಿ ಕಾರಿಡಾರ್ ರಸ್ತೆ. ಏರ್ಪೋರ್ಟ್ ವರೆಗೂ ನಮ್ಮ ಮೆಟ್ರೋ ವಿಸ್ತರಣೆ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.
ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ ಬಹಳ ದೊಡ್ಡ ಸಮಸ್ಯೆ ಉಂಟುಮಾಡಿದ್ದು, ಹಲವಾರು ಸಂತ್ರಸ್ತರಿಗೆ ಅವರ ಮುಂದಿನ ಜೀವನಕ್ಕೆ ಸೂಕ್ತ ರೀತಿಯ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಮುಂಜಾಗರೂಕತಾ ಕ್ರಮವಾಗಿ ಹಲವು ಗ್ರಾಮಗಳನ್ನು ಎತ್ತರದ ಪ್ರದೇಶಗಳಿಗೆ ಶಿಫ್ಟ್ ಮಾಡಬೇಕಿದೆ. ಇದಕ್ಕಾಗಿ ಕೈಗಾರಿಕೋದ್ಯಮಿಗಳು ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡಬೇಕು ಎಂದು ಸಿಎಂ ಉದ್ಯಮಿಗಳಲ್ಲಿ ಮನವಿ ಮಾಡಿಕೊಂಡರು.