ವಿಪಕ್ಷ ನಾಯಕನ ಸ್ಥಾನಕ್ಕೆ ದಿಲ್ಲಿಯಲ್ಲಿ ಸಿದ್ದರಾಮಯ್ಯ ರಣತಂತ್ರ

ಹೊಸದಿಲ್ಲಿ: ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ ಸ್ಥಾನವನ್ನು ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಸ್ಥಾನಕ್ಕೆ ಪರ್ಯಾಯ ನಾಯಕನನ್ನು ಹುಡುಕುತ್ತಿರುವ ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿಯುವರಾ? ಎಂಬ ಪ್ರಶ್ನೆ ಇದೀಗ ಮೂಡಿದೆ.

ಸೋನಿಯಾ ಗಾಂಧಿ ಮತ್ತೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಹುದ್ದೆಗೆ ಏರಿದ ನಂತರ ಗುರುವಾರ ದೆಹಲಿಯಲ್ಲಿ ಪಕ್ಷದ ಮೊದಲ ಸಭೆ ಏರ್ಪಡಿಸಲಾಗಿತ್ತು. ಈ ಸಭೆಗೆ ಎಲ್ಲಾ ರಾಜ್ಯದ ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿತ್ತು. ಕರ್ನಾಟಕದಿಂದ ಸಿದ್ದರಾಮಯ್ಯ ಈ ಸಭೆಯನ್ನು ಪ್ರತಿನಿಧಿಸಿದ್ದರು.

ಈ ವೇಳೆ ಹಿರಿಯ ನಾಯಕರಾದ ಅಹಮದ್ ಪಟೇಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಎ.ಕೆ. ಆಂಟನಿ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಈ ಬಾರಿಯೂ ಪ್ರತಿಪಕ್ಷ ನಾಯಕ ಸ್ಥಾನವನ್ನು ತನಗೆ ನೀಡುವಂತೆ ಒತ್ತಡ ಹೇರಿದ್ದರು. ಅಲ್ಲದೆ, ಈ ಕುರಿತು ಚರ್ಚಿಸಲು ಇಂದು ಅವರು ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ.

ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ ಸಿದ್ದರಾಮಯ್ಯನವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ಸೋನಿಯಾ ಗಾಂಧಿಗೆ ಆಸಕ್ತಿ ಇಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಮಹಾರಾಷ್ಟ್ರ ಮಾದರಿಯಲ್ಲಿ 2 ಹುದ್ದೆಗಳನ್ನು ಸೃಷ್ಟಿಸಲು ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿಯು ತಿಳಿದುಬಂದಿದೆ.

ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರದಲ್ಲಿ ಸಿಎಲ್​ಪಿ ಮತ್ತು ಪ್ರತಿಪಕ್ಷದ ನಾಯಕತ್ವ ಎಂದು ಎರಡು ಹುದ್ದೆಗಳನ್ನು ಸೃಷ್ಟಿ ಮಾಡುವ ಮೂಲಕ ಪಕ್ಷದೊಳಗಿನ ಅಧಿಕಾರವನ್ನು ಹಂಚಿಕೆ ಮಾಡಿತ್ತು. ಈ ಮಾದರಿ ಯಶಸ್ವಿಯಾಗಿರುವ ಪರಿಣಾಮ ರಾಜ್ಯದಲ್ಲೂ ಇದನ್ನೇ ಅನುಸರಿಸಲು ಕಾಂಗ್ರೆಸ್​ ಮುಂದಾಗಿದೆ. ಈ ಮೂಲಕ ಇಬ್ಬರಿಗೆ ಅವಕಾಶ ನೀಡುವ ಚಿಂತನೆ ನಡೆಸಿದೆ.

ಈ ತಂತ್ರದ ಪ್ರಕಾರ ಸಿದ್ದರಾಮಯ್ಯನವರನ್ನು ಸಿಎಲ್​ಪಿ ನಾಯಕನನ್ನಾಗಿ ನೇಮಕ ಮಾಡಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಹೊಸ ಮುಖವನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ. ಈ ಮೂಲಕ ಸಿದ್ದರಾಮಯ್ಯನವರ ಪ್ರಭಾವವನ್ನು ಕುಗ್ಗಿಸುವುದು ಕಾಂಗ್ರೆಸ್ ಹೈಕಮಾಂಡ್​ ರಣತಂತ್ರ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಇಂದು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುತ್ತಿರುವುದು ಸಹ ಮಹತ್ವ ಪಡೆದುಕೊಂಡಿದೆ. ಈ ಭೇಟಿಯ ವೇಳೆ ಸೋನಿಯಾ ಗಾಂಧಿ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿಯುವರಾ? ಅಥವಾ ಪ್ರತಿಪಕ್ಷ ನಾಯಕನ ಸ್ಥಾನಮಾನ ಸಿದ್ದರಾಮಯ್ಯನವರ ಕೈ ತಪ್ಪುತ್ತದೆಯಾ? ಎಂಬುದನ್ನು ಕಾದು ನೋಡಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ