ಹೊಸದಿಲ್ಲಿ: ಕರ್ನಾಟಕದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮಗಳು ಐಶ್ವರ್ಯ ಇದೀಗ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. ಸತತ 2 ಗಂಟೆಗಳಿಂದ ಐಶ್ವರ್ಯ ವಿಚಾರಣೆ ನಡೆಯುತ್ತಿದೆ. ಆದಾಯವೇ ಇಲ್ಲದ ಐಶ್ವರ್ಯ ಅವರಿಗೆ 108 ಕೋಟಿ ರೂ. ಆಸ್ತಿ ಬಂದಿದ್ದು ಹೇಗೆ ಎಂದು ಜಾರಿ ನಿರ್ದೇಶನಾಲಯ ಪ್ರಶ್ನಿಸುತ್ತಿದೆ. ಐಶ್ವರ್ಯ ಹೆಸರಿನಲ್ಲಿರುವ ಆಸ್ತಿಗಳ ಬಗ್ಗೆ ಇಡಿ ಕೂಲಂಕಶ ತನಿಖೆ ನಡೆಸುತ್ತಿದೆ. ಐಶ್ವರ್ಯ ಹೆಸರಿನಲ್ಲಿರುವ ಕೆಲವೊಂದು ಆಸ್ತಿಗಳು ಬೇನಾಮಿ ಎಂಬ ಅನುಮಾನ ಇಡಿಗೆ ಇದೆ. 23 ವರ್ಷ ವಯಸ್ಸಿನ ಐಶ್ವರ್ಯ 108 ಕೋಟಿ ರೂ. ಆಸ್ತಿ ಸಂಪಾದಿಸಿದ್ದು ಹೇಗೆ ಎಂಬ ಪ್ರಶ್ನೆ ಇಡಿಗೆ ಕಾಡುತ್ತಿದೆ. ಯಾವುದಾದರೂ ಆಸ್ತಿ ಬೇನಾಮಿ ಎಂಬುದು ಸಾಬೀತಾದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇಡಿಗೆ ಇದೆ.
ಐಶ್ವರ್ಯ ಅವರಿಗೆ ತಮ್ಮ ತಂದೆಯಿಂದ ಬಂದಿರುವ ಆಸ್ತಿ ಎಷ್ಟು ಎಂಬ ತನಿಖೆಯೂ ನಡೆಯುತ್ತಿದೆ. ಮಗಳು ಐಶ್ವರ್ಯಗೆ ತಂದೆ ಡಿಕೆಶಿ 11 ಕೋಟಿ ರೂ. ಸಾಲವನ್ನೂ ನೀಡಿದ್ದಾರೆ ಎಂದು ದಾಖಲೆಗಳಲ್ಲಿ ತಿಳಿದುಬಂದಿದೆ. ಒಂದು ವೇಳೆ ಡಿಕೆಶಿ ತೆರಿಗೆ ವಂಚನೆ ಮಾಡಿ ಕುಟುಂಬ ಸದಸ್ಯರ ಹೆಸರಲ್ಲಿ ಆಸ್ತಿ ಮಾಡಿದ್ದಾರಾ ಅನ್ನೋ ಅನುಮಾನಗಳೂ ಇವೆ. ಹಾಗೇನಾದರೂ ತೆರಿಗೆ ವಂಚನೆ ಮಾಡಿ ಕುಟುಂಬ ಸದಸ್ಯರ ಹೆಸರಲ್ಲಿ ಆಸ್ತಿ ಮಾಡಿದ್ದಾದರೆ, ಮೋದಿ ಸರ್ಕಾರದ ಬೇನಾಮಿ ಆಸ್ತಿ ತಡೆ ಕಾನೂನಿನನ್ವಯ ಜಪ್ತಿ ಮಾಡಿಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ.
ದೆಹಲಿಯ ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯಲ್ಲಿ ಐಶ್ವರ್ಯ ವಿಚಾರಣೆ ನಡೆಯುತ್ತಿದೆ. ಐಶ್ವರ್ಯ ಅವರ ಹೆಸರಿನಲ್ಲಿರುವ ಟ್ರಸ್ಟ್ಗೆ ಡಿ. ಕೆ. ಶಿವಕುಮಾರ್ ಕಡೆಯಿಂದ ಹಣಕಾಸು ವರ್ಗಾವಣೆ ನಡೆದಿರುವ ದಾಖಲೆಗಳು ಇಡಿಗೆ ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಐಶ್ವರ್ಯ ಅವರನ್ನೂ ಇಡಿ ವಿಚಾರಣೆಗೆ ಕರೆದಿದೆ.
ಇಡಿ ವಿಚಾರಣೆ ಎದುರಿಸಲು ಡಿಕೆಶಿ ಪುತ್ರಿ ಐಶ್ವರ್ಯ ಬುಧವಾರವಷ್ಟೇ ದೆಹಲಿಗೆ ಬಂದಿಳಿದ್ದರು. ಚಿಕ್ಕಮ್ಮನ ಜೊತೆ ಸಂಜೆ ದೆಹಲಿಗೆ ಬಂದಿದ್ದ ಐಶ್ವರ್ಯ, ವಿಚಾರಣೆಗೆ ಸಕಲ ರೀತಿಯಲ್ಲೂ ಸಜ್ಜಾಗಿದ್ದರು.
ಕಳೆದ ಕೆಲ ದಿನಗಳ ಹಿಂದಷ್ಟೇ ನವದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ, ಡಿಕೆಶಿ ಬಂಟ ಆಂಜನೇಯ ಅವರನ್ನೂ ಜಾರಿ ನಿರ್ದೇಶನಾಲಯ (ED) ವಿಚಾರಣೆ ನಡೆಸಿತ್ತು. ಸೆಪ್ಟಂಬರ್ 3ರಂದು ಡಿಕೆಶಿ ಅವರನ್ನು ಇಡಿ ಬಂಧನ ಮಾಡಿತ್ತು. ಇದೀಗ ಡಿಕೆಶಿವಕುಮಾರ್ ಇಡಿ ವಶದಲ್ಲೇ ಇದ್ದಾರೆ. ಸೆಪ್ಟಂಬರ್ 13ರ ವರೆಗೂ ಡಿಕೆಶಿ ಅವರನ್ನು ನ್ಯಾಯಾಲಯ ಇಡಿ ವಶಕ್ಕೆ ನೀಡಿದೆ.