ಮುಖ್ಯಮಂತ್ರಿಗಳು ಮತ್ತು ಸಚಿವರು ಮಾತ್ರ ಆಡಳಿತ ನಡೆಸಬೇಕು-ಅವರ ಕುಟುಂಬದವರು ಯಾರೂ ಆಡಳಿತದ ವಿಚಾರದಲ್ಲಿ ಮೂಗು ತೂರಿಸಬಾರದು

ಬೆಂಗಳೂರು, ಸೆ.12- ದೈನಂದಿನ ಚಟುವಟಿಕೆ ಹಾಗೂ ಇಲಾಖೆಯ ವ್ಯವಹಾರಗಳಲ್ಲಿ ನಿಮ್ಮ ಕುಟುಂಬದ ಸದಸ್ಯರನ್ನು ಹಸ್ತಕ್ಷೇಪ ಮಾಡದಂತೆ ದೂರ ಇಡಬೇಕೆಂದು ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಎಲ್ಲ ಸಚಿವರಿಗೆ ಕೇಂದ್ರ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಅಧಿಕಾರಿಗಳ ವರ್ಗಾವಣೆ, ಇಲಾಖೆಗಳ ಕಾಮಗಾರಿ, ಗುತ್ತಿಗೆ ನೀಡುವುದು ಸೇರಿದಂತೆ ಯಾವುದೇ ವಿಷಯದಲ್ಲೂ ಕುಟುಂಬದ ಸದಸ್ಯರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು. ಇದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ ಎಂಬ ಸಂದೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರವಾನಿಸಿದ್ದಾರೆ.

ಕುಟುಂಬ ಸದಸ್ಯರು ಅನಗತ್ಯವಾಗಿ ಮಧ್ಯಪ್ರವೇಶ ಮಾಡುವುದರಿಂದ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಲ್ಲದೆ ಅನಗತ್ಯವಾಗಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದರಿಂದ ಇಲಾಖೆಯಲ್ಲಿ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮ್ಮ ಮಕ್ಕಳೇ ಇರಲಿ ಅಥವಾ ಇನ್ಯಾರೇ ಇರಲಿ ಹತ್ತಿರಕ್ಕೂ ಸೇರಿಸಬಾರದು ಎಂದು ಖುದ್ದು ಅಮಿತ್ ಷಾ ಸಲಹೆ ಮಾಡಿದ್ದಾರೆ.

ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಸೇರಿದಂತೆ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿತ್ತು.

ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಇದು ಭಾರೀ ಮುಳುವಾಗಲಿದೆ ಎಂಬುದನ್ನು ಅರಿತಿರುವ ವರಿಷ್ಠರು ಕುಟುಂಬದವರ ಮಧ್ಯಪ್ರವೇಶಕ್ಕೆ ಬ್ರೇಕ್ ಹಾಕಿದ್ದಾರೆ.
ಪ್ರಮಾಣವಚನದಿಂದ ಹಿಡಿದು, ಸಚಿವ ಸಂಪುಟ ರಚನೆ, ಡಿಸಿಎಂಗಳ ನೇಮಕ, ಇದಾದ ನಂತರ, ಖಾತೆ ಹಂಚಿಕೆ, ಎಲ್ಲದಕ್ಕೂ, ಯಡಿಯೂರಪ್ಪ, ಅಮಿತ್ ಶಾ ಅವರ ಗ್ರೀನ್ ಸಿಗ್ನಲ್‍ಗೆ ಕಾಯುವ ಪರಿಸ್ಥಿತಿಯಿತ್ತು.ಯಡಿಯೂರಪ್ಪನವರ ಸರಕಾರ ಟೇಕ್ ಆಫ್ ಆಗಲೇ ಇಲ್ಲ ಎನ್ನುವ ವಿರೋಧ ಪಕ್ಷಗಳ ಟೀಕೆಯ ನಡುವೆ, ಹಿರಿಯ ಬಿಜೆಪಿ ಮುಖಂಡರು, ಖಾತೆ ಹಂಚಿಕೆಯ ನಂತರ ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಇವೆಲ್ಲದರ ನಡುವೆ, ಅಮಿತ್ ಶಾ ಕಡೆಯಿಂದ ಈ ಹೊಸ ಸೂಚನೆ ಹೊರಬಿದ್ದಿದ್ದು, ಮುಖ್ಯಮಂತ್ರಿಗಳು ಮತ್ತು ಸಚಿವರು ಮಾತ್ರ ಆಡಳಿತ ನಡೆಸಬೇಕು.ಅವರ ಕುಟುಂಬದವರು ಯಾರೂ ಆಡಳಿತದ ವಿಚಾರದಲ್ಲಿ ಮೂಗು ತೂರಿಸಬಾರದು ಎನ್ನುವ ಸೂಚನೆ ಬಂದಿದೆ ಎಂಬ ಮಾಹಿತಿಯಿದೆ.
ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ, ಆಡಳಿತ ಯಂತ್ರದಲ್ಲಿ ಹಸ್ತಕ್ಷೇಪ ಮಾಡುತ್ತಾರೆಂದು, ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.

ವಿಜಯೇಂದ್ರ, ಯಾವ ಯಾವ ಗುತ್ತಿಗೆದಾರರನ್ನು ಭೇಟಿಯಾಗುತ್ತಿದ್ದಾರೆ, ಏನು ಡಿಮಾಂಡ್ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಸದ್ಯದಲ್ಲೇ ಎಲ್ಲಾ ವಿಷಯವನ್ನು ಹೊರಹಾಕಲಿದ್ದೇನೆ ಎಂದು ಡಿಕೆಶಿ ಹೇಳಿದ್ದರು.
ಇದರ ಬೆನ್ನಲ್ಲೇ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣವನ್ನು ಮಾರ್ಕೆಟ್ ದಂಧೆ ಮಾಡಿಕೊಂಡು ಕುಳಿತಿದ್ದೀರಿ. ನಿಮ್ಮ ಹಾಗೇ ನನ್ನ ಮಗನನ್ನು ಹತ್ತಿರಕ್ಕೆ ನಾನು ಸೇರಿಸಿಲ್ಲ. ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ ನೀವು ಮತ್ತೆ ಜೈಲಿಗೆ ಹೋಗಲಿದ್ದೀರಾ ಎಂದು ಬಿಎಸ್‍ವೈಗೆ ಎಚ್ಚರಿಕೆ ನೀಡಿದ್ದರು.

ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮುಖಂಡರೊಬ್ಬರು, ದೆಹಲಿಯಲ್ಲಿ ಬಿಜೆಪಿ ವರಿಷ್ಠರಿಗೆ ಈ ವಿಚಾರವನ್ನು ಮುಟ್ಟಿಸಿದ್ದಾರೆ.ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿರುವ ಅಮಿತ್ ಷಾ, ಪಕ್ಷದ ಐದು ಮಂದಿ ಹಿರಿಯ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಕುಟುಂಬದ ಸದಸ್ಯರು, ಆಡಳಿತದಲ್ಲಿ ತಲೆಹಾಕದಂತೆ ನೋಡಿಕೊಳ್ಳಿ ಎಂದು ಯಡಿಯೂರಪ್ಪನವರ ಪುತ್ರ ವಿಜಯೇಂದ್ರ, ಈಶ್ವರಪ್ಪ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಗೋವಿಂದ ಕಾರಜೋಳ ಅವರಿಗೆ ಅಮಿತ್ ಷಾ ಈ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕುಟುಂಬದ ಸದಸ್ಯರು ಆಡಳಿತ ಯಂತ್ರದಲ್ಲಿ ಪದೇ ಪದೇ ಮೂಗು ತೂರಿಸುವುದರಿಂದ ಸರ್ಕಾರಕ್ಕೆ ಕಪ್ಪುಚುಕ್ಕೆ ಬೀಳುತ್ತದೆ. ಹಾಗಾಗಿ, ವಿರೋಧ ಪಕ್ಷಗಳಿಗೆ ಸುಮ್ಮನೆ ಆಹಾರವಾಗಬೇಡಿ ಎನ್ನುವ ಸೂಚನೆ, ದೆಹಲಿಯಿಂದ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ