ಬೆಂಗಳೂರು, ಸೆ.7- ಗೋಕಾಕ್ನಲ್ಲಿ ಸಮಾವೇಶ ಈಗೆಷ್ಟು ಸರಿ… ಸಂಕಷ್ಟದಲ್ಲಿರುವ ಜನರ ನಡುವೆ ಸಾಮಥ್ರ್ಯ ಪ್ರದರ್ಶನಕ್ಕೆ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಭಾರೀ ಮಳೆ, ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಅದರಲ್ಲೂ ಗೋಕಾಕ್, ಅಥಣಿ ಕ್ಷೇತ್ರಗಳಲ್ಲಿ ಜನ ಮನೆ, ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಸಾವಿರಾರು ಜನ ಇನ್ನೂ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬಹುತೇಕ ಮನೆಗಳು ಪ್ರವಾಹಕ್ಕೆ ಕುಸಿದು ಬಿದ್ದಿದ್ದು, ಈಗಷ್ಟೇ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿರುವುದರ ನಡುವೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ರಾಜಕೀಯ ಲೆಕ್ಕಾಚಾರವೇ ಮೇಲಾಗಿದೆ.
ಜನಪ್ರತಿನಿಧಿಯಾಗಿ ಸಂತ್ರಸ್ತರಿಗೆ ಸ್ಪಂದಿಸಬೇಕಾಗಿತ್ತು. ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಂಕಷ್ಟಕ್ಕೆ ನೆರವಾಗಬೇಕಾಗಿತ್ತು. ಆದರೆ ಜನ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಜಾರಕಿಹೊಳಿಯವರು ಅಲ್ಲಿಂದ ಬಂದು ಇಂದು ಸಂಕಲ್ಪ ಸಮಾವೇಶದ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಉಪ ಚುನಾವಣೆಗೆ ಭರ್ಜರಿ ವೇದಿಕೆ ರೂಪಿಸಿದ್ದಾರೆ. ಈಗಾಗಲೇ ಅನರ್ಹಗೊಂಡಿರುವ ಇವರು ಸುಪ್ರೀಂಕೋರ್ಟ್ ಸ್ಪೀಕರ್ ತೀರ್ಪನ್ನು ರದ್ದುಗೊಳಿಸಿ ರಾಜೀನಾಮೆಯನ್ನು ಅಂಗೀಕರಿಸುವಂತೆ ಸೂಚನೆ ನೀಡಿದರೆ ಉಪಮುಖ್ಯಮಂತ್ರಿಯಾಗುವ ಅವಕಾಶ ಸಿಗುತ್ತದೆ.
ಮುಂದೆ ಎದುರಾಗಬಹುದಾದ ಉಪಚುನಾವಣೆ ಎದುರಿಸಲು ಈಗಲೇ ತಯಾರಿ ನಡೆಸಿದ್ದಾರೆ. ಅವರು ಸಚಿವರಾದಾಗಿನಿಂದಲೂ ಸರ್ಕಾರದ ಜೊತೆ ಅಷ್ಟಾಗಿ ಸಂಪರ್ಕ ಹೊಂದಿರಲಿಲ್ಲ. ರಾಜೀನಾಮೆ ನೀಡಿದ ಮೇಲೆ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ನಂತರ ನಿರಂತರವಾಗಿ ಆಪರೇಷನ್ ಕಮಲ ಯತ್ನ ನಡೆಸಿ ಸಮ್ಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿಬಂತು. ಸ್ವತಃ ಅವರ ಸಹೋದರ ಸತೀಶ್ ಜಾರಕಿಹೊಳಿಯವರೇ ಆರೋಪ ಮಾಡಿ ನೆರೆ ಸಂದರ್ಭದಲ್ಲಿ ಜನರ ಜೊತೆಗಿರಬೇಕಾಗಿದ್ದ ರಮೇಶ್ ಜಾರಕಿಹೊಳಿಯವರು ದೆಹಲಿಗೆ ಹೋಗಿ ಕುಳಿತಿದ್ದಾರೆ ಎಂದು ಹೇಳಿದ್ದರು.
ಈಗ ಅವರ ಅಳಿಯ ಅಂಬಿರಾವ್ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಗೋಕಾಕ್ನಲ್ಲಿ ನಡೆಸಿದ್ದಾರೆ. ಇದರಲ್ಲಿ ಅವರ ಆಪ್ತ ಮಹೇಶ್ ಕಮಟಳ್ಳಿ ಅವರೂ ಭಾಗಿಯಾಗಿದ್ದಾರೆ. ಈ ಎರಡೂ ಕ್ಷೇತ್ರಗಳು ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿವೆ. ಕಷ್ಟ ಕೇಳಬೇಕಾದವರು ಈಗ ಸಂಕಲ್ಪ ಸಮಾವೇಶ ನಡೆಸುತ್ತ ಉಪಚುನಾವಣೆಯ ತಯಾರಿಯಲ್ಲಿ ತೊಡಗಿರುವುದು ವಿಪರ್ಯಾಸ.