ಜಯದೇವ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಹೃದಯ ಪುನರ್ವಸತಿ ಕೇಂದ್ರ

ಬೆಂಗಳೂರು, ಸೆ.7- ಜಯದೇವ ಸಂಸ್ಥೆ, ನೀಡಿ ಹಾರ್ಟ್ ಫೌಂಡೇಷನ್ ಹಾಗೂ ರೋಟರಿ ಬೆಂಗಳೂರು ಇಂದಿರಾನಗರರವರ ವತಿಯಿಂದ 1 ಕೋಟಿ 80 ಲಕ್ಷ ರೂ.ಗಳ ಅನುದಾನದಿಂದ ಜಯದೇವ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಹೃದಯ ಪುನರ್ವಸತಿ ಕೇಂದ್ರವನ್ನು ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷ ಹಾಗೂ ಧರ್ಮದರ್ಶಿ ಗ್ಯಾರಿ ಸಿ.ಕೆ.ಹುವಾಂಗ್ ಉದ್ಘಾಟಿಸಿದರು.

ಈ ಕೇಂದ್ರದಲ್ಲಿ ಕಾರ್ಡಿಯಾಕ್ ಫಿಸಿಯೋಥೆರಪಿ, ಲೇಸರ್ ಘಟಕಗಳು, ಟೆಲಿಮೆಟ್ರಿ, 2ಡಿ ಎಕೊ, ಟಿಎಂಟಿ, ಹೋಲ್ಟರ್ ಮತ್ತು ಆ್ಯಂಬುಲೇಟರಿ ರಕ್ತದೊತ್ತಡ ಮಾಪಕ ಸೌಲಭ್ಯಗಳ ಜತೆ ಯೋಗ ಥೆರಪಿ ಕೂಡ ಇರುತ್ತದೆ. ಆಹಾರ ತಜ್ಞರು ಹಾಗೂ ಮನಃಶಾಸ್ತ್ರಜ್ಞರ ಸಲಹೆ ಲಭ್ಯವಿರುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಪುನರ್ವಸತಿ ಕೇಂದ್ರದ ಮುಲ ಉದ್ದೇಶ ಹೃದಯ ಶಸ್ತ್ರ ಚಿಕಿತ್ಸೆಗಳಾದ ಬೈಪಾಸ್, ವಾಲ್ವ್ ಬದಲಾವಣೆ, ಆ್ಯಂಜಿಯೋಪ್ಲಾಸ್ಟಿ, ಫೇಸ್‍ಮೇಕರ್ ಮತ್ತು ಇತರೆ ಚಿಕಿತ್ಸೆಗೊಳಗಾದ ರೋಗಿಗಳಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮೊದಲು ಅವರಿಗೆ ಆಹಾರ ಪದ್ಧತಿ, ಔಷಧೋಪಚಾರಗಳ ಬಗ್ಗೆ ಮಾಹಿತಿ, ಹೃದ್ರೋಗಗಳ ಬಗ್ಗೆ ಸಮಗ್ರ ಮಾಹಿತಿ ಕೂಡಿರುವ ಫಲಕಗಳು ಮತ್ತು ವಿಡಿಯೋಗಳು ಹಾಗೂ ದಿನನಿತ್ಯದ ವ್ಯಾಯಾಮ ಪ್ರಕ್ರಿಯೆಗಳ ಬಗ್ಗೆ ವೈಜ್ಞಾನಿಕವಾಗಿ ಪರೀಕ್ಷಿಸಿ ಅವರ ಹೃದಯದ ಶಕ್ತಿಗೆ ಅನುಗುಣವಾಗಿ ಸಲಹೆ ಕೊಡಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಹೃದ್ರೋಗ ಪುನರ್ವಸತಿ ಕೇಂದ್ರವು ರೋಗಿಗಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಹೆಚ್ಚು ವಿಶ್ವಾಸ ಕೊಡುವ ಉದ್ದೇಶವಾಗಿದ್ದು, ಕಾಯಿಲೆಯಿಂದ ಬೇಗ ಗುಣಮುಖರಾಗಿ ಪುನಶ್ಚೇತನಗೊಂಡು ತಮ್ಮ ದಿನನಿತ್ಯದ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಸಮಾರಂಭದಲ್ಲಿ ಅಂತಾರಾಷ್ಟ್ರೀಯ ರೋಟರಿಯ ಅಧ್ಯಕ್ಷರು ಹಾಗೂ ಧರ್ಮದರ್ಶಿಗಳಾದ ಗ್ಯಾರಿ ಸಿ.ಕೆ.ಹುವಾಂಗ್ ಹಾಗೂ ಟ್ರಸ್ಟಿಗಳಾದ ಗುಲಾಂ ವನವಾಟಿ, ಡಾ.ಸಮೀರ್ ಹರಿಯಾನಿ, ಒ.ಪಿ.ಖನ್ನಾ, ಅಮರನಾಥ್ ಟಂಡನ್, ಮನೋಜ್ ಅಗರ್ವಾಲ್, ಕೃಷ್ಣನ್ ಮೆನನ್, ಜೆ.ಎಂ.ಮಹೇಶ್ವರಿ ಹಾಗೂ ಹಿರಿಯ ರೋಟರಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ