ನಿನ್ನೆ ಪ್ರಧಾನಿ ಬಂದಿದ್ದೇನೋ ನಿಜ-ಆದರೆ, ಪರಿಹಾರ ಘೋಷಣೆ ಎಲ್ಲಿ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಸೆ.7- ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಾರೆ, ನೆರೆ ಸಂತ್ರಸ್ತರ ಕಷ್ಟ ಕೇಳಿ ತಕ್ಷಣವೇ ಪರಿಹಾರ ಘೋಷಿಸುತ್ತಾರೆ ಎಂದು ಹೇಳಿಕೊಂಡು ಜನರನ್ನು ನಂಬಿಸಿದ್ದ ಬಿಜೆಪಿ ನಾಯಕರು ಈಗ ಏನು ಉತ್ತರ ಹೇಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಜನ ಸಾಮಾನ್ಯರ ಕಷ್ಟಗಳ ಬಗ್ಗೆ ಇಷ್ಟೊಂದು ತಾತ್ಸಾರದ ಮನೋಭಾವ ಹೊಂದಿರಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ 22 ಜಿಲ್ಲೆಗಳು ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅವರು ಕಾಟಾಚಾರಕ್ಕೆ ಬಂದು ವೈಮಾನಿಕ ಸಮೀಕ್ಷೆ ನಡೆಸಿ ಹೋದರು. ಆಗಲೂ ಹಣ ಬಂದಿಲ್ಲ. ಕೇಂದ್ರದಿಂದ ಅಧಿಕಾರಿಗಳ ತಂಡ ಬಂದು ಸಮೀಕ್ಷೆ ಮಾಡಿ ಹೋಗಿ ವಾರ ಕಳೆದಿದೆ. ಈಗಲೂ ಹಣ ಬಂದಿಲ್ಲ. ನೆರೆ ಪೀಡಿತ ಪ್ರದೇಶಗಳ ಜನರ ತಾಳ್ಮೆಯ ಕಟ್ಟೆ ಹೊಡೆದಿದೆ.

ಅವರನ್ನು ಸಮಾಧಾನಪಡಿಸಲು ಬಿಜೆಪಿಯ ನಾಯಕರು ಸೆ.7ರಂದು ಪ್ರಧಾನಮಂತ್ರಿ ಬೆಂಗಳೂರಿಗೆ ಬರುತ್ತಿದ್ದಾರೆ. ಪರಿಹಾರದ ಹಣ ಘೋಷಣೆ ಮಾಡುತ್ತಾರೆ ಎಂದು ಹೇಳುತ್ತಿದ್ದರು. ನಿನ್ನೆ ಪ್ರಧಾನಿ ಬಂದಿದ್ದೇನೋ ನಿಜ. ಆದರೆ, ಪರಿಹಾರ ಘೋಷಣೆ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

ಚಂದ್ರಯಾನ-2ಅನ್ನು ವೀಕ್ಷಣೆ ಮಾಡಲು ಬೆಂಗಳೂರಿನ ಇಸ್ರೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ವಾಪಸ್ ಹೋಗಿದ್ದಾರೆ. ನಿನ್ನೆ ಸಂಜೆಯಿಂದ ಮಧ್ಯ ರಾತ್ರಿ 1.30ರವರೆಗೂ ಸಮಾಯವಕಾಶವಿದ್ದರೂ ನೆರೆಯ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡಿಲ್ಲ.

ಬೆಳಗ್ಗೆ ಕೂಡ ನೆರೆ ಸಂತ್ರಸ್ತರ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಯಾರ ಜತೆಯೂ ನೆರೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿಲ್ಲ. ಜನರ ಸಮಸ್ಯೆಗಳ ಬಗ್ಗೆ ಇಷ್ಟು ಉದಾಸೀನತೆ, ತಾತ್ಸಾರ ಇರಬಾರದು. ಜನರಿಗೆ ನಾನೇನು ಉತ್ತರ ಕೊಡಬೇಕೆಂಬ ಸರ್ವಾಧಿಕಾರಿ ಧೋರಣೆಯನ್ನು ಮೋದಿ ಅನುಸರಿಸಿದಂತೆ ಇದೆ ಎಂದು ದಿನೇಶ್‍ಗುಂಡೂರಾವ್ ಆರೋಪಿಸಿದರು.

ರಾಜ್ಯದ ಬಿಜೆಪಿ ನಾಯಕರಿಗೆ ಧೈರ್ಯ, ತಾಕ್ಕತ್ತು ಇಲ್ಲ. ಮೋದಿ ಎದುರು ನಿಂತು ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಅವರಿಗೆ ತಿಳಿಸಲು ಇವರಿಂದ ಆಗಿಲ್ಲ. ಕಾಂಗ್ರೆಸ್ ಪಕ್ಷವೇ ಮುಂದಾಗಿ ಪ್ರಧಾನಿ ಅವರು ಬೆಂಗಳೂರಿಗೆ ಬಂದಾಗ ಭೇಟಿಗೆ ಸಮಯ ನೀಡುವಂತೆ ಮನವಿ ಮಾಡಿತ್ತು. ನೆರೆ ಸಂತ್ರಸ್ತರ ಕುರಿತ ಮನವಿಯನ್ನೂ ಸಿದ್ದಪಡಿಸಿಟ್ಟುಕೊಂಡಿದ್ದೆವು.

ಆದರೆ, ನಮಗೆ ಮೋದಿ ಅವರು ಸಮಯ ನೀಡಲಿಲ್ಲ. ಜನರ ಸಮಸ್ಯೆಗಳನ್ನು ಹೇಗೆ ತಲುಪಿಸುವುದು ? ಕೇಂದ್ರದಿಂದ ಪರಿಹಾರ ಬರುವುದು ಯಾವಾಗ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದಿಗೂ ಕೂಡ ಕೊಡಗು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆ ಭೀತಿ ಎದುರಾಗಿದೆ ಎಂದು ದಿನೇಶ್ ಆತಂಕ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ