ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2 ಅಭಿಯನಕ್ಕೆ ಅತ್ಯಲ್ಪ ಹಿನ್ನೆಡೆ

ಬೆಂಗಳೂರು, ಸೆ.7- ಅಂತರಿಕ್ಷ ಕ್ಷೇತ್ರದಲ್ಲಿ ಮತ್ತೊಂದ ಮಹಾ ವಿಕ್ರಮದ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷಿ ಚಂದ್ರಯಾನ-2 ಅಭಿಯನಕ್ಕೆ ಅತ್ಯಲ್ಪ ಹಿನ್ನೆಡೆಯಾಗಿದೆ. ಚಂದಿರದ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿಯುತ್ತಿದ್ದ ವಿಕ್ರಮ್ ಲ್ಯಾಂಡರ್ ನೌಕೆ ಕೊನೆ ಕ್ಷಣದಲ್ಲಿ ಇಸ್ರೋ ಕಂಟ್ರೋಲ್ ರೂಮ್‍ನಿಂದ ಸಂಪರ್ಕ ಕಡಿತಗೊಂಡಿತು.

ಸತತ 46 ದಿನಗಳ ಕಾಲ ಎಲ್ಲ ಹಂತಗಳನ್ನು ಯಶಸ್ವಿಯಾಗಿ ನಿಭಾಯಿಸಿ ಚಂದಿರನಿಗೆ ಸ್ವಲ್ಪ ಸ್ವಲ್ಪವೇ ಹತ್ತಿರವಾಗುತ್ತಿದ್ದ ನೌಕೆ ಕೊನೆ ಕ್ಷಣದಲ್ಲಿ ತಾಂತ್ರಿಕ ದೋಷದಿಂದ ಸಂಪರ್ಕ ಕಳೆದುಕೊಂಡಿದೆ. ಆದರೆ ಇದು ದೊಡ್ಡ ಮಟ್ಟದ ವಿಫಲತೆ ಅಲ್ಲವೇ ಅಲ್ಲ. ಚಂದ್ರಯಾನ-2 ಅಭಿಯಾನದಲ್ಲಿ ಭಾರತ ಶೇ.95ರಷ್ಟು ಯಶಸ್ಸು ಸಾಧಿಸಿದೆ. ಕೇವಲ ಶೇ.5ರಷ್ಟು ಮಾತ್ರ ಅತ್ಯಲ್ಪ ಹಿನ್ನಡೆಯಾಗಿದೆ ಇಲ್ಲಿಯವರೆಗೆ ಇಸ್ರೋ ಸಾಧಿಸಿದ್ದ ಮಹತ್ಸಾಧನೆ ಎಂದು ಕೂಡ ದೇಶ ವಿದೇಶಗಳ ಮಾಧ್ಯಮಗಳು ಬಣ್ಣಿಸಿವೆ.

ಲ್ಯಾಂಡಿಂಗ್‍ಗೆ ಕೇವಲ 2.1 ಕಿ.ಮೀ. ಸನಿಹದಲ್ಲಿದ್ದಾಗಲೇ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತು ಎಂದು ಇಸ್ರೋ ಇಂದು ಬೆಳಗ್ಗೆ ಅಧಿಕೃತ ಹೇಳಿಕೆ ನೀಡಿದೆ
ಕೊನೆ ಕ್ಷಣದವರೆಗೂ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವ ಸ್ಪಷ್ಟ ಮುನ್ಸೂಚನೆ ನೀಡಿತ್ತಾದರೂ, ಶಶಾಂಕನ ಮೇಲ್ಮೈ ಮೇಲೆ ಸ್ಪರ್ಶ ಮಾಡುವುದಕ್ಕೆ ಕೇವಲ 2.1 ಕಿ.ಮೀ. ಅಂತರವಿದ್ದಾಗ ಸಿಗ್ನಲ್ ಕಡಿತಗೊಂಡಿದು.

ಹೀಗಾಗಿ ಕಂಟ್ರೋಲ್ ರೂಮ್‍ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿ ಖಗೋಳ ವಿಜ್ಞಾನಿಗಳ ಸಮುದಾಯ ಹತಾಶಗೊಂಡಿತು. ಸತತ 46 ದಿನಗಳ ಪರಿಶ್ರಮ ಕೊನೆ ಕ್ಷಣದಲ್ಲಿ ಹಿನ್ನೆಡೆಯಾಗಿದ್ದು ಭಾರತೀಯರೆಲ್ಲರಲ್ಲೂ ಸಹಜವಾಗಿ ಬೇಸರಕ್ಕೆ ಕಾರಣವಾಯಿತು.

ವಿಕ್ರಮ್ ಲ್ಯಾಂಡರ್‍ನ ಒಟ್ಟು ನಾಲ್ಕು ಎಂಜಿನ್‍ಗಳನ್ನು ಉರಿಸುವ ಮೂಲಕ ಲ್ಯಾಂಡರ್‍ನನ್ನು ಸುರಕ್ಷಿತವಾಗಿ ಚಂದ್ರಮನ ಮೇಲ್ಮೈ ಮೇಲೆ ಇಳಿಸುವ ಕಟ್ಟಕಟೆಯ ಹಂತಕ್ಕೆ ತರಲಾಯತು. ಆದರೆ ವಿಕ್ರಮ್ ಸುರಕ್ಷಿತ ಲ್ಯಾಂಡಿಂಗ್ ಹಂತ ತಲುಪುತ್ತಿದ್ದಂತೆ ಕಂಟ್ರೋಲ್ ರೂಮ್ ಜೊತೆ ಸಂಪರ್ಕ ಕಳೆದುಕೊಂಡಿತು.

ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್‍ನನ್ನು ಸಂಪರ್ಕಿಸಲು ನಿರಂತರ ಪ್ರಯತ್ನ ಮತ್ತು ಪರಿಶ್ರಮ ಪಟ್ಟರು. ಆದರೆ ಮಿಸ್ಸಿಂಗ್ ಲಿಂಕ್ ಜೊತೆ ಸಂಪರ್ಕ ಹೊಂದಲು ದುರದೃಷ್ಟವಶಾತ್ ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ವಿಕ್ರಮ್ ಲ್ಯಾಂಡರ್‍ನ ಸಂಪರ್ಕ ಕಡಿತಗೊಂಡಿರುವುದನ್ನು ಇಂದು ಮುಂಜಾನೆ ಅಧಿಕೃತವಾಗಿ ಘೋಷಿಸಿ ವಿಷಾದಿಸಿದರು.

ಸಂಪರ್ಕ ಕಡಿತಗೊಂಡಿರುವ ವಿಕ್ರಮ್ ಲ್ಯಾಂಡರ್ ಮತ್ತು ಅದರೊಳಗೆ ಇರುವ ಪ್ರಜ್ಞಾನ್ ರೋವರ್ ಸ್ಥಿತಿಗತಿ ಮತ್ತು ಪ್ರಸ್ತುತ ಕಾರ್ಯನಿರ್ವಹಣೆ ಮಾಹಿತಿಗಾಗಿ ವಿಜ್ಞಾನಿಗಳು ಸತತ ಪ್ರಯತ್ನ ಮುಂದುವರಿಸಿದ್ದಾರೆ. ಮತ್ತೆ ನೌಕೆಯ ಜೊತೆ ಸಂಪರ್ಕ ಸಾಧಿಸುವ ಆಶಾಭಾವನೆಯೊಂದಿಗೆ ಸಾಧ್ಯವಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮುಂದಿನ ಮಾಹಿತಿ ಬಗ್ಗೆ ಇಡೀ ಭಾರತವೂ ಕುತೂಹಲದಿಂದ ನಿರೀಕ್ಷಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ