ಬೆಂಗಳೂರು, ಸೆ.7- ಚಾಮುಂಡಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ಮುಚ್ಚಿಸದಂತೆ ಜಿಲ್ಲಾ ಸಚಿವರಿಗೆ ಸಲಹೆ ನೀಡಿ ಎಂದು ನೂರಾರು ವ್ಯಾಪಾರಿಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ.
ನಿನ್ನೆ ತಡರಾತ್ರಿ 11ಗಂಟೆಗೆ ಮೈಸೂರಿನಿಂದ ಆಗಮಿಸಿದ ಚಾಮುಂಡಿ ಬೆಟ್ಟದ ಪಾದಚಾರಿ ಮಾರ್ಗದ ಅಂಗಡಿಗಳ ಮಾಲೀಕರು ಜೀವನೋಪಾಯಕ್ಕಾಗಿ ಈ ಅಂಗಡಿಗಳನ್ನೇ ಆಶ್ರಯಿಸಿರುವ ನಾವು ಬೀದಿಪಾಲಾಗುತ್ತೇವೆ. ಈ ಕುರಿತು ಸರ್ಕಾರದ ಗಮನ ಸೆಳೆಯಿರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಪೂರ್ವಿಕರ ಕಾಲದಿಂದಲೂ ಚಾಮುಂಡಿ ಬೆಟ್ಟದ ರಸ್ತೆಗಳ ಇಕ್ಕೆಲಗಳಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದೇವೆ. ಈ ವ್ಯಾಪಾರದಿಂದಲೇ ನಮ್ಮ ಜೀವನ ನಿರ್ವಹಣೆಯಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ವ್ಯಾಪಾರಕ್ಕಾಗಿ ಬ್ಯಾಂಕುಗಳು ಸಾಲ ಕೊಟ್ಟಿವೆ. ಈಗ ಏಕಾಏಕಿ ಅಂಗಡಿಗಳನ್ನು ಮುಚ್ಚಿಸಿದರೆ ನಮ್ಮ ಬದುಕು ಬೀದಿಗೆ ಬೀಳುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬಡಕುಟುಂಬಕ್ಕೆ ಸೇರಿದ ನಮಗೆ ಯಾವುದೇ ಹೊಲ-ಜಮೀನು, ಗದ್ದೆ ಇರುವುದಿಲ್ಲ. ಈ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದೇವೆ. ಈಗ ಚಾಮುಂಡಿ ಬೆಟ್ಟದ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡ ಉದ್ಘಾಟನೆ ಮಾಡಲು ಬಂದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಬೀದಿಬದಿಯ ವ್ಯಾಪಾರಿಗಳನ್ನು ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದರಿಂದ ನಮಗೆ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ. ಸೂಕ್ತವಾದ ಜಾಗ ನೀಡಿ ನಮ್ಮ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲು ಸರ್ಕಾರದ ಜೊತೆ ಮಾತುಕತೆ ನಡೆಸುವಂತೆ ವ್ಯಾಪಾರಿಗಳು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಸಮಾಧಾನಪಡಿಸಿ ಕಳುಹಿಸಿದರು.