ಪೋನ್ ಕದ್ದಾಲಿಕೆ ಪ್ರಕರಣ- ತನಿಖೆಯನ್ನು ಚುರುಕುಗೊಳಿಸಿದ ಸಿಬಿಐ

ಬೆಂಗಳೂರು, ಸೆ.6- ಪೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದ್ದು, ಹಲವು ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿದೆ.

ಮಹತ್ವದ ಮಾಹಿತಿಯಲ್ಲಿ ಕದ್ದಾಲಿಕೆಯ ಡೇಟಾಗಳನ್ನು ಪೆನ್‍ಡ್ರೈವ್‍ನಲ್ಲಿ ಸಂಗ್ರಹಿಸಲಾಗಿರುವ ಅಂಶವನ್ನು ಸಿಬಿಐ ಪತ್ತೆಹಚ್ಚಿದೆ ಎಂದು ತಿಳಿದುಬಂದಿದೆ.

ನಗರದ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್‍ಗೆ ಕಳೆದ 2018ರ ಅಕ್ಟೋಬರ್ 1ರಿಂದ 2019ರ ಆಗಸ್ಟ್ 8ರ ವರೆಗೆ ಕಲೆಹಾಕಿರುವ ಡೇಟಾ ಸಂಗ್ರಹದ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಕಲೆಹಾಕಿ ಕೆಲ ಭಾಗದ ಮಾತುಕತೆಯನ್ನು ಶೇಖರಿಸಿರುವುದು ಪತ್ತೆಯಾಗಿದೆ . ಇದರಲ್ಲಿ ಕೆಲವು ಉನ್ನತಾಧಿಕಾರಿಗಳ ಪಾತ್ರವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯದಲ್ಲೇ ಹಿಂದಿನ ಪೋಲೀಸ್ ಕಮಿಷನರ್ ಸೇರಿದಂತೆ ಹಲವು ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈವರೆಗೆ ಕಾನೂನಿನಲ್ಲಿ ಕೆಲವು ಮಾಹಿತಿಗಳನ್ನು ಪಡೆಯಲು ಪೋನ್ ಟ್ಯಾಪಿಂಗ್‍ಗೆ ಅವಕಾಶವಿದ್ದು, ರಾಜಕಾರಣಿಗಳು ಮತ್ತು ಕೆಲ ಅಧಿಕಾರಿಗಳ ಮಾಹಿತಿ ಸಂಗ್ರಹಿಸಿರುವುದಕ್ಕೆ ಅನುಮಾನ ವ್ಯಕ್ತವಾಗಿದ್ದು, ಇದು ಭಾರೀ ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ