ಮತ್ತೆ ಜೋರಾದ ವರುಣ ಆರ್ಭಟ

ಬೆಂಗಳೂರು, ಸೆ.6- ಭಾರೀ ಮಳೆಯಿಂದ ತತ್ತರಿಸಿಹೋಗಿದ್ದ ಕಾಫಿ ನಾಡು ದಕ್ಷಿಣ ಕನ್ನಡ, ಉತ್ತರ ಕನ್ನಡ, ಕರಾವಳಿ, ಮಲೆನಾಡು ಭಾಗಗಳು ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ವರುಣ ಆರ್ಭಟಿಸುತ್ತಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಮಳೆ ಇದೇ ರೀತಿ ಮುಂದುವರಿದರೆ ಪ್ರವಾಹ ಭೀತಿ ಎದುರಾಗಲಿದೆ. ಗ್ರಾಮೀಣ ಭಾಗದ ಹಳ್ಳ-ಕೊಳ್ಳಗಳು ತುಂಬಿವೆ. ಉಪನದಿಗಳಾದ ನಳಿನಿ, ಮಾಲತಿ, ನಂದಿನಿ ನದಿಗಳು ತುಂಬಿ ಹರಿಯುತ್ತಿವೆ.

ಸತತ ಮಳೆಯಿಂದಾಗಿ ಜನಸಾಮಾನ್ಯರ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ನಷ್ಟ ಸಂಭವಿಸಿದ್ದು, ಅದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ಮಳೆ ಪ್ರಾರಂಭವಾಗಿ ಜನ ಕಂಗಾಲಾಗಿದ್ದಾರೆ.

ಇತಿಹಾಸ ಪ್ರಸಿದ್ಧ ಮಲೆ ಮಾಣಕೇಶ್ವರ ಸ್ವಾಮಿ ದೇವಾಲಯದ ಗುಡ್ಡದ ಒಂದು ಕಡೆ ಭೂ ಕುಸಿತ ಉಂಟಾಗಿದೆ. ಇದರಿಂದ ಗುಡ್ಡದ ಸಮೀಪ ಮನೆಗಳಿಗೆ ಹಾನಿಯಾಗಿದ್ದು, ಜನರು ಭಯಭೀತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಕೊಯ್ನಾ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಇದರಿಂದ ಚಿಕ್ಕೋಡಿಯ ಕಲ್ಲೋಳ, ಎಡೋರು ಸೇತುವೆ ಜಲಾವೃ ತವಾಗಿದ್ದು, ಅಲ್ಲಿನ ನಿವಾಸಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸ್ಥಳೀಯ ಆಡಳಿತ ಮನವಿ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆ ಜಲಾಶಯ ಭರ್ತಿಯಾಗಿದ್ದು, ನೀರನ್ನು ಹೊರಬಿಡಲಾಗುತ್ತಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸಹ ಮಳೆ ಜೋರಾಗಿದ್ದು, ಕುಮಾರಧಾರ ನದಿ ತುಂಬಿ ಹರಿಯುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಜೋರು ಮಳೆಯಾಗುತ್ತಿದ್ದು, ಕೆಆರ್‍ಎಸ್ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದ್ದು, ಕೊಳ್ಳೆಗಾಲ ತಾಲ್ಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕಳೆದ 15 ದಿನಗಳ ಹಿಂದೆ ತಾಲ್ಲೂಕಿನ ಹಳೆ ಹಂಪಾಪುರ, ಹಳೆ ಹನಗಳ್ಳಿ, ದಾಸನಪುರ, ಮುಳ್ಳೂರು ಗ್ರಾಮಗಳು ಈಗಾಗಲೇ ಪ್ರವಾಹದಿಂದ ತತ್ತರಿಸಿಹೋಗಿದ್ದವು. ಈಗಷ್ಟೆ ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸಿದ ಗ್ರಾಮಸ್ಥರಿಗೆ ಮತ್ತೆ ಪ್ರವಾಹದ ಭೀತಿ ಹೆಚ್ಚಾಗಿರುವುದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಬೆಳ್ಳಂಬೆಳಗ್ಗೆ ಕೃಷಿ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಕೃಷಿ ಚಟುವಟಿಕೆಗೆ ಪ್ರಾರಂಭಿಸಿದ ರೈತರು ಭಯದಿಂದ ಮನೆಗಳಿಗೆ ವಾಪಸಾದರು.

ಇನ್ನು ಕೊಡಗಿನಲ್ಲೂ ಸಹ ಮಳೆ ಮುಂದುವರಿದಿದ್ದು, ಮಡಿಕೇರಿ, ಮಂಗಳೂರು ರಸ್ತೆಯ ಜೋಡುಪಾಲ ಬಳಿ ಭೂ ಕುಸಿತವಾಗಿದೆ.

ಮಳೆಯಿಂದಾಗಿ ಮತ್ತೆ ಎಲ್ಲಾ ಕೆರೆ-ಕುಂಟೆ, ನದಿಗಳು ತುಂಬಿ ಹರಿಯುತ್ತಿರುವುದರಿಂದ ಆ ಭಾಗದ ಜನಜೀವನದ ಮೇಲೆ ಭಯದ ಛಾಯೆ ಆವರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ