ಕೇಂದ್ರ ಸರ್ಕಾರದ ಕ್ರಮಕ್ಕೆ ಆಂಧ್ರ ಬ್ಯಾಂಕ್ ಸಿಬ್ಬಂದಿಗಳ ವಿರೋಧ

ಬೆಂಗಳೂರು, ಸೆ.6- ಆಂಧ್ರ ಬ್ಯಾಂಕ್ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಕರ್ನಾಟಕ ಮತ್ತು ಕೇರಳ ಘಟಕಗಳ ಆಂಧ್ರ ಬ್ಯಾಂಕ್ ನೌಕರರ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬ್ಯಾಂಕ್ ವಿಲೀನಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಆಂಧ್ರಬ್ಯಾಂಕ್ ಸಿಬ್ಬಂದಿ ಒಕ್ಕೂಟ ಜಯನಗರ 4ನೇ ಬ್ಲಾಕ್ ವಲಯ ಕಚೇರಿಯ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದೆ.

ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಬ್ಯಾಂಕ್‍ಗಳ ವಿಲೀನ ಮಾಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ಆಂಧ್ರ ಬ್ಯಾಂಕ್ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದರು. ನಾಯಕ್ ಸಮಿತಿ ಪ್ರಕಾರ ಸರ್ಕಾರದ ಹಸ್ತಕ್ಷೇಪ ಶೇ. 50ಕ್ಕಿಂತ ಕಡಿಮೆ ಇರಬೇಕು. ಆ ಮೂಲಕ ಬ್ಯಾಂಕ್‍ಗಳು ಸ್ವಾಯತ್ತವಾಗಿ ವ್ಯವಹಾರ ನಡೆಸಲು ಅನುವು ಮಾಡಿಕೊಡಬೇಕು. ಈಗ ಬ್ಯಾಂಕ್‍ಗಳು ಸಾಂಪ್ರದಾಯಿಕ ಪದ್ಧತಿಯಿಂದ ತಂತ್ರಜ್ಞಾನ ಬಳಕೆ ಮಾಡಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿವೆ. ಹೀಗಿರುವಾಗ ಬ್ಯಾಂಕ್‍ನ್ನು ವಿಲೀನಗೊಳಿಸುವ ಕ್ರಮ ಸರಿಯಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಆರೋಗ್ಯ ವಿಮೆ, ಸಾಮಾನ್ಯ ವಿಮೆ ಮತ್ತು ಮ್ಯೂಚ್ಯೂವಲ್ ಫಂಡ್‍ಗಳನ್ನು ಮಾರಾಟ ಮಾಡುತ್ತಿವೆ. ರಾಜಕೀಯ ಹಸ್ತಕ್ಷೇಪದಿಂದ ಎನ್‍ಪಿಎಸ್ ಫಲಿತಾಂಶ ಕುಸಿತಕ್ಕೆ ಒಳಗಾಗಿತ್ತು ಎಂದು ಪ್ರತಿಭಟನಾಕಾರರು ದೂರಿದರು.

ಆಲ್ ಇಂಡಿಯಾ ಆಂಧ್ರ ಬ್ಯಾಂಕ್ ಎಂಪ್ಲಾಯಿ ಯೂನಿಯನ್ ಮಹಾಪ್ರಧಾನ ಕಾರ್ಯದರ್ಶಿ ಪದ್ಮನಾಭನ್, ಕರ್ನಾಟಕ ಮತ್ತು ಕೇರಳ ವಿಭಾಗದ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಪಿ.ರಾಘವೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.

ಆಂಧ್ರ ಬ್ಯಾಂಕ್ ಅತ್ಯುತ್ತಮ ಸೇವೆ ನೀಡುತ್ತಾ ಜನಸ್ನೇಹಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬ್ಯಾಂಕ್‍ನನ್ನು ವಿಲೀನಗೊಳಿಸುವುದಕ್ಕೆ ಗ್ರಾಹಕರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಆಂಧ್ರ ಬ್ಯಾಂಕ್‍ನ್ನು ಈಗಿರುವ ಸ್ಥಿತಿಯಲ್ಲಿಯೇ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ವಿಲೀನ ಮಾಡಬಾರದು ಎಂದು ಒಕ್ಕೂಟದ ಮಹಾಪ್ರಧಾನ ಕಾರ್ಯದರ್ಶಿ ಎಂ. ಪದ್ಮನಾಭನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ