ಕೊಯ್ನಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ- ಕೃಷ್ಣಾ ನದಿ ಪಾತ್ರದ ಜನರಲ್ಲಿ ಮತ್ತಷ್ಟು ಆತಂಕ

ಬೆಳಗಾವಿ/ಕೊಡಗು/ಮಂಡ್ಯ, ಸೆ.5- ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೊಯ್ನಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಉತ್ತರ ಕರ್ನಾಟಕದ ಕೃಷ್ಣಾ ನದಿ ಪಾತ್ರದ ಜನರಲ್ಲಿ ಮತ್ತಷ್ಟು ಆತಂಕ ಎದುರಾಗಿದೆ.

ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಬೆಳಗಾವಿ ಎಸ್‍ಪಿ ನಿಂಬರಗಿ ಮನವಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ತುತ್ತಾಗಿತ್ತು. ಅದರಲ್ಲೂ ಬೆಳಗಾವಿ ಅಕ್ಷರಶಃ ನಲುಗಿಹೋಗಿತ್ತು. ಇದೀಗ ಕೊಯ್ನಾ ಡ್ಯಾಂನಿಂದ ಮತ್ತೆ ನೀರು ಬಿಡುಗಡೆ ಮಾಡುತ್ತಿರುವುದರಿಂದ ಮತ್ತೆ ಜನ ಭಯಭೀತಿಗೊಂಡಿದ್ದಾರೆ.

ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಎಚ್.ಡಿ.ದೇವೇಗೌಡ ಸೇತುವೆ ಮುಳುಗಡೆಯಾಗಿದ್ದು, ಐದಾರು ಹಳ್ಳಿಗಳ ಸಂಪರ್ಕ ಕಡಿತವಾಗಿದೆ. ಚಿಕ್ಕೋಡಿ, ಬಾಗಲಕೋಟೆ, ರಾಯಚೂರು ಮುಂತಾದೆಡೆ ಪ್ರವಾಹದ ಭೀತಿ ಎದುರಾಗಿದೆ. ಪ್ರವಾಹದ ಪರಿಸ್ಥಿತಿಯಿಂದ ಈಗಷ್ಟೇ ಚೇತರಿಸಿಕೊಂಡಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಘಟಪ್ರಭ-ಮಲಪ್ರಭ ನದಿಗಳು ಉಕ್ಕಿ ಹರಿಯುತ್ತಿವೆ. ನದಿಪಾತ್ರದ ಹಲವು ಹಳ್ಳಿಗಳು ಜಲಾವೃತವಾಗತೊಡಗಿವೆ. ಶೂರ್ಪಾಲಿ-ಜಂಬನಿ ಮಧ್ಯದ ಸೇತುವೆ ಜಲಾವೃತಗೊಂಡಿದ್ದು, ಜನ ಕಂಗಾಲಾಗಿದ್ದಾರೆ. ರಾಧಾನಗರಿ ಜಲಾಶಯದಿಂದಲೂ ಸಹ 7119 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ನಾರಾಯಣಪುರ ಡ್ಯಾಂನಿಂದ 1.5 ಲಕ್ಷ ಕ್ಯೂಸೆಕ್ ನೀರು ಹೊರಬಿಡುತ್ತಿರುವುದರಿಂದ ಯಡಿಯೂರು-ಎಲ್ಲೋಳ ಸೇತುವೆ, ನೀಲಕಂಠರಾಯ ಗಡ್ಡಿ ನಡುಗಡ್ಡೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದ್ದು, 300 ವರ್ಷದ ಹಳೆಯ ಕಟ್ಟಡವೊಂದು ನೆಲಸಮವಾಗಿದ್ದು, ಕೂದಲೆಳೆ ಅಂತರದಲ್ಲಿ ಜನ ಅಪಾಯದಿಂದ ಪಾರಾಗಿದ್ದಾರೆ.

ಕೊಡಗಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಕೃಷ್ಣರಾಜಸಾಗರ (ಕೆಆರ್‍ಎಸ್) ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಮೊನ್ನೆಯಷ್ಟೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದರು. ಇದೀಗ ಮತ್ತೆ ಕೊಡಗು ಜಿಲ್ಲೆಯಲ್ಲಿ ವರುಣನ ಆಗಮನದಿಂದ ಜನಜೀವನ ಅಸ್ತವ್ಯಸ್ತವಾಗುವ ಲಕ್ಷಣ ಕಾಣುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದ್ದು, ಭಗಂಡೇಶ್ವರ ದೇವಾಲಯದ ಮೆಟ್ಟಿಲವರೆಗೆ ಪ್ರವಾಹದ ನೀರು ನುಗ್ಗಿದೆ.

ಆತಂಕದಿಂದ ಇಲ್ಲಿನ ಹಲವು ಕುಟುಂಬಸ್ಥರು ಮನೆ ಖಾಲಿ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ. ನಾಳೆವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಪ್ಪ, ಎನ್‍ಆರ್ ಪುರ, ಶೃಂಗೇರಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಮೂಡಿಗೆರೆ ತಾಲ್ಲೂಕಿನಲ್ಲೂ ಕೂಡ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಲೆನಾಡು ಭಾಗದಲ್ಲಿ ಗುಡ್ಡಕುಸಿಯುವ ಭೀತಿ ಎದುರಾಗಿದ್ದು, ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ