ಕೊನೆ ಅವಧಿಯ ಮೇಯರ್ ಸ್ಥಾನ ಬಿಜೆಪಿಗೆ-ಬೆಳೆಯುತ್ತಲೇ ಇರುವ ಆಕಾಂಕ್ಷಿಗಳ ಪಟ್ಟಿ

ಬೆಂಗಳೂರು, ಸೆ.5- ಬಿಬಿಎಂಪಿ ಕೊನೆ ಅವಧಿಯ ಮೇಯರ್ ಸ್ಥಾನ ಬಿಜೆಪಿಗೆ ಒಲಿಯುವುದು ಖಚಿತವಾಗುತ್ತಿದ್ದಂತೆ ಮಹಾಪೌರರ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.

ಹಾಲಿ ಮೇಯರ್ ಗಂಗಾಂಬಿಕೆ ಅವರ ಅವಧಿ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದ್ದು, ಹೊಸ ಮೇಯರ್ ಆಯ್ಕೆಗೆ ತಿಂಗಳ ಕೊನೆಯಲ್ಲೇ ಚುನಾವಣೆ ನಡೆಯಲಿದೆ.

ಕ್ಷಿಪ್ರ ರಾಜಕಾರಣದ ಬೆಳವಣಿಗೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕೊನೆ ಅವಧಿಯ ಮೇಯರ್ ಸ್ಥಾನ ಕೇಸರಿ ಪಾಳಯಕ್ಕೆ ಒಲಿದುಬಂದಿದೆ.

ಹೀಗಾಗಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ , ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್, ಹಿರಿಯ ಸದಸ್ಯರಾದ ಉಮೇಶ್ ಶೆಟ್ಟಿ ಇಲ್ಲವೆ ಮಂಜುನಾಥ್ ರಾಜು ಅವರಲ್ಲಿ ಒಬ್ಬರು ಮೇಯರ್ ಆಗುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು.

ಆದರೆ, ಇದೀಗ ಮೇಯರ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದ್ದು, ಈ ನಾಲ್ವರ ಜತೆಗೆ ನಾಗರಬಾವಿ ವಾರ್ಡ್ ಸದಸ್ಯ ಮೋಹನ್‍ಕುಮಾರ್, ಕತ್ರಗುಪ್ಪೆ ವಾರ್ಡ್‍ನ ಸಂಗಾತಿ ವೆಂಕಟೇಶ್ ಹಾಗೂ ಕೋದಂಡರೆಡ್ಡಿ ಅವರ ಹೆಸರುಗಳು ಚಾಲ್ತಿಗೆ ಬಂದಿವೆ.

ಈ ಏಳು ಮಂದಿ ಜತೆಗೆ ಇನ್ನಿತರ ಹಲವಾರು ಹಿರಿಯ ಸದಸ್ಯರುಗಳು ತಮ್ಮ ಗಾಡ್‍ಫಾದರ್‍ಗಳ ಮೂಲಕ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಸಂಗಾತಿ ವೆಂಕಟೇಶ್ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕುಮಾರಸ್ವಾಮಿ ಲೇಔಟ್ ವಾರ್ಡ್‍ನ ಎಲ್.ಶ್ರೀನಿವಾಸ್ ಅವರು ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು ಮಂಜುನಾಥ್ ರಾಜು ಅವರನ್ನು ಮೇಯರ್ ಆಗಿಸಲು ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಸಂಘ ಪರಿವಾರದಲ್ಲಿ ಉತ್ತಮ ವ್ಯಕ್ತಿ ಎಂದೇ ಬಿಂಬಿತರಾಗಿರುವ ಕೋದಂಡರೆಡ್ಡಿ ಅವರ ಹೆಸರನ್ನು ಮೇಯರ್ ಆಗಿಸಲು ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉಮೇಶ್ ಶೆಟ್ಟಿ ಇಲ್ಲವೆ ಮೋಹನ್‍ಕುಮಾರ್ ಅವರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ನೀಡಲೇಬೇಕು ಎಂದು ಸಚಿವ ಸೋಮಣ್ಣ ಪಟ್ಟು ಹಿಡಿಯುವ ಸಾಧ್ಯತೆಗಳಿವೆ.

ಕೊನೆ ಅವಧಿಯ ಮೇಯರ್ ಸ್ಥಾನ ಕಳೆದ ನಾಲ್ಕು ವರ್ಷಗಳಿಂದ ಪಾಲಿಕೆ ಪ್ರತಿಪಕ್ಷದ ನಾಯಕರಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿರುವ ಪದ್ಮನಾಭರೆಡ್ಡಿ ಅವರ ಹೆಸರು ಕೇಳಿಬಂದಿದೆ.

ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಹಲವಾರು ಬೃಹತ್ ಹಗರಣಗಳ ದಾಖಲೆಗಳನ್ನು ಸಂಗ್ರಹಿಸಿ ಪಕ್ಷಕ್ಕೆ ಒದಗಿಸಿರುವ ಪದ್ಮನಾಭರೆಡ್ಡಿ ಅವರ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸಕ್ತಿ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಟ್ಟಾರೆ ಕೊನೆ ಅವಧಿಯ ಮೇಯರ್ ಸ್ಥಾನಕ್ಕೆ ಬಿಜೆಪಿಯ ಹಲವಾರು ಹಿರಿಯ ಸದಸ್ಯರುಗಳು ಕಣ್ಣಿಟ್ಟಿದ್ದು, ಯಾರಿಗೆ ಮೇಯರ್ ಪಟ್ಟ ಒಲಿಯಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ