ಅಪಘಾತದಲ್ಲಿ ಮೃತಪಟ್ಟಿದ್ದ ಸಾಫ್ಟ್‍ವೇರ್ ಎನ್.ಬಿ.ಯತೀಂದ್ರನಾಥ್- ಕುಟುಂಬಕ್ಕೆ 3.20 ಕೋಟಿ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರು, ಸೆ.5- ಕಾರು ಅಪಘಾತದಲ್ಲಿ ಮೃತಪಟ್ಟ ಸಾಫ್ಟ್‍ವೇರ್ ಎನ್.ಬಿ.ಯತೀಂದ್ರನಾಥ್ ಅವರ ಕುಟುಂಬಕ್ಕೆ 3.20 ಕೋಟಿ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ.

ಶಿವಮೊಗ್ಗ ಮೂಲದ ಎನ್.ಬಿ.ಯತೀಂದ್ರನಾಥ್ ಅವರು 2015ರ ಫೆಬ್ರವರಿ 10ರಂದು ಬಾಗೇಪಲ್ಲಿ ಬಳಿಯ ಶುಂಕಲಮ್ಮ ದೇವಸ್ಥಾನಕ್ಕೆ ಹೋಗುತ್ತಿರುವಾಗ ಮಧ್ಯಾಹ್ನ 3.30ರ ಸುಮಾರಿನಲ್ಲಿ ಕಾರು ನಿಯಂತ್ರಣ ತಪ್ಪಿ ಬೆಂಗಳುರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 7ರ ಪರಗೋಡು ಬಳಿ ಪಲ್ಟಿಯಾಗಿತ್ತು. ಅಪಘಾತದಲ್ಲಿ ಯತೀಂದ್ರನಾಥ್ ಸಾವನ್ನಪ್ಪಿದ್ದರು.

ಬೆಂಗಳೂರಿನ 8ನೇ ಹೆಚ್ಚುವರಿ ಸಣ್ಣ ವ್ಯಾಜ್ಯಗಳ ಮತ್ತು ಮೋಟಾರು ಅಪಘಾತ ಕ್ಲೇಮ್‍ಗಳ ನ್ಯಾಯಾಧೀಕರಣ ಮೃತನ ಕುಟುಂಬದ ಸದಸ್ಯರಿಗೆ ವಾರ್ಷಿಕ ಶೇ.9ರ ಬಡ್ಡಿ ದರದಲ್ಲಿ 1.70 ಕೋಟಿ ಪರಿಹಾರ ನೀಡುವಂತೆ 2017ರಲ್ಲೇ ವಿಮಾ ಕಂಪೆನಿಗೆ ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದ ಯತೀಂದ್ರನಾಥ್ ಅವರ ಪತ್ನಿ ಎಸ್.ಎಲ್.ವರ್ಷಾ ಹಾಗೂ ಕುಟುಂಬದ ಇತರ ಸದಸ್ಯರು ಪರಿಹಾರ ಮೊತ್ತವನ್ನು 50 ಕೋಟಿಗೆ ಹೆಚ್ಚಿಸಬೇಕೆಂದು ಮನವಿ ಮಾಡಿದ್ದರು.

ದ್ವಿತೀಯ ಪಿಯುಸಿಯಲ್ಲಿ 6ನೇ ರ್ಯಾಂಕ್, ಸಿಇಟಿಯಲ್ಲಿ 3ನೇ ರ್ಯಾಂಕ್, ಹಾಲ್ ಇಂಡಿಯಾ ಐಐಟಿ-ಜೆಇಇನಲ್ಲಿ 77ನೇ ರ್ಯಾಂಕ್, ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾ ಶೋಧನಾ ಪರೀಕ್ಷೆಯಲ್ಲಿ 76ನೇ ರ್ಯಾಂಕ್, ಮದ್ರಾಸ್‍ನ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಯತೀಂದ್ರನಾಥ್ ತೇರ್ಗಡೆಯಾಗಿದ್ದು, ಅಮೆರಿಕಾದ ಜಾರ್ಜ್‍ಜಿಯಾ ಇನ್ಸ್‍ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ಪಡೆದಿದ್ದರು.

ಅಮೆರಿಕಾದ ಥಾಮಸ್ ಆಲ್ವಾ ಎಡಿಷನ್ ಪೇಟೆಂಟ್ ಮೆಡೆಲ್ ಪಡೆದಿದ್ದರು. ಅಮೆರಿಕಾದಲ್ಲಿ ಕೆಲಸ ಮಾಡಿ ನಂತರ ಬೆಂಗಳೂರಿಗೆ ಬಂದಿದ್ದರು. ಪ್ರತಿಭಾನ್ವಿತರಾದ ಯತೀಂದ್ರನಾಥ್ ಅವರ ಜೀವಮಾನದ ದುಡಿಮೆ ಪರಿಗಣಿಸುವುದಾದರೆ 50 ಕೋಟಿಯ ಪರಿಹಾರ ಕಡಿಮೆಯಾಗಲಿದೆ ಎಂಬುದು ಕುಟುಂಬ ಸದಸ್ಯರ ವಾದವಾಗಿತ್ತು.

ಆದರೆ, ಇದಕ್ಕೆ ವಿರುದ್ಧವಾಗಿ ವಿಮಾ ಕಂಪೆನಿ ಯತೀಂದ್ರನಾಥ್ ಅವರು ಅಪಘಾತಕ್ಕೊಳಗಾಗಿ ಮೃತಪಟ್ಟ ಸಂದರ್ಭದಲ್ಲಿ ಯಾವುದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ನಿರುದ್ಯೋಗಿಯಾಗಿದ್ದರು. ಹಾಗಾಗಿ ನ್ಯಾಯಾಧೀಕರಣ ನಿಗದಿ ಮಾಡಿರುವ 1.70 ಕೋಟಿ ಪರಿಹಾರದ ಮೊತ್ತವನ್ನು ರದ್ದುಗೊಳಿಸುವಂತೆ ವಾದಿಸಿತ್ತು.

ಎರಡೂ ಕಡೆಯ ವಾದ-ವಿವಾದ ಆಲಿಸಿದ ನ್ಯಾಯಾಲಯ 3.20 ಕೋಟಿ ಪರಿಹಾರವನ್ನು ನಿಗದಿ ಮಾಡಿದ್ದು, ಬಡ್ಡಿ ಸಮೇತ ಪಾವತಿಸುವಂತೆ ಸೂಚನೆ ನೀಡಿದೆ.

ಈ ಪರಿಹಾರ ಮೊತ್ತದಲ್ಲಿ ಯತೀಂದ್ರನಾಥ್ ಅವರ ಪತ್ನಿ ಮತ್ತು ಅಪ್ರಾಪ್ತ ಮಗನಿಗೆ ಶೇ.30ರಷ್ಟು, ತಂದೆ-ತಾಯಿಗೆ ಶೇ.15ರಷ್ಟು, ಮದುವೆಯಾಗದ ಸಹೋದರಿಗೆ ಶೇ.10ರಷ್ಟು ಹಣ ಹಂಚಿಕೆ ಮಾಡಬೇಕೆಂದು ಸಲಹೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ