ಡಿಸಿಎಂ ಅಶ್ವತ್ಥ್ ನಾರಾಯಣರವರಿಗೆ ಡಿ.ಕೆ.ಶಿವಕುಮಾರ್‍ರವರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ- ಮಾಜಿ ಸಂಸದ ಧೃವ ನಾರಾಯಣ

ಮೈಸೂರು, ಸೆ.3- ಇಡಿ ಮತ್ತು ಇನ್‍ಕಮ್ ಟ್ಯಾಕ್ಸ್ ಬಳಸಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿರುವುದು ಖಂಡನೀಯ ಎಂದು ಮಾಜಿ ಸಂಸದ ಧೃವ ನಾರಾಯಣ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಬಳಕೆಯಿಂದ ಕಾಂಗ್ರೆಸ್‍ನ ಪ್ರಮಖ ನಾಯಕರನ್ನು ತುಳಿಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ ಹಾಗೂ ಸವದಿಯವರ ಹೇಳಿಕೆಗಳು ಖಂಡನೀಯ ಎಂದು ಹೇಳಿದ ಅವರು, ಇವರುಗಳು ಯಾವ ರೀತಿ ಉಪಮುಖ್ಯಮಂತ್ರಿ ಯಾಗಿದ್ದಾರೆ ಎಂಬುದು ಜನತೆಗೆ ತಿಳಿದಿದೆ ಎಂದು ಹೇಳಿದರು.

ಅಶ್ವತ್ಥ್ ನಾರಾಯಣ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದ ಅವರು, ಅನರ್ಹ ಶಾಸಕರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದರಿಂದಲೇ ಋಣ ತೀರಿಸಲು ಅಶ್ವತ್ಥ್ ನಾರಾಯಣ ಅವರಿಗೆ ಡಿಸಿಎಂ ಹುದ್ದೆ ನೀಡಲಾಯಿತು ಎಂದು ಟೀಕಿಸಿದರು.

ಹಿರಿತನಕ್ಕೆ ಸಿಗಬೇಕಾಗಿದ್ದ ಉಪಮುಖ್ಯಮಂತ್ರಿ ಸ್ಥಾನ ಅಶ್ವತ್ಥ್ ನಾರಾಯಣ ಅವರಿಗೆ ಸಿಕ್ಕಿದೆ. ಕಾರಣ ಅನರ್ಹ ಶಾಸಕರನ್ನು ಕರೆದುಕೊಂಡು ಬಂದಿರುವುದೇ ಎಂದರು.

ಡಿ.ಕೆ. ಶಿವಕುಮಾರ್ ಅವರು ಹಿಂದಿನಿಂದಲೇ ಬೇರೆ ಬೇರೆ ರೀತಿಯ ವ್ಯಾಪಾರ ಮಾಡುವ ಮೂಲಕ ಸಂಪಾದನೆ ಮಾಡಿದ್ದಾರೆ. ಅವರ ಮೇಲೆ ತನಿಖೆ ನಡೆಯಲ್ಲಿ , ಆದರೆ ದುರುದ್ದೇಶದಿಂದ ತನಿಖೆ ನಡೆಸಬಾರದು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಮೈತ್ರಿ ಇಲ್ಲದೆ ಚುನಾವಣೆ ಹೆದರಿಸುತ್ತೇವೆ ಎಂದರು.

ಮೈತ್ರಿಯೇ ನಮಗೆ ಲೋಕಸಭಾ ಚುನಾವಣೆ ಹಿನ್ನಡೆಗೆ ಕಾರಣ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ