ಬೆಂಗಳೂರು,ಅ.31- ಇತ್ತೀಚೆಗೆ ರಾಷ್ಟ್ರೀಯ ತನಿಖಾದಳ(ಎನ್ಐಎ)ದ ಅಧಿಕಾರಿಗಳು ನಗರದಲ್ಲಿ ಬಂಧಿಸಿದ್ದ ಮೂವರು ಶಂಕಿತ ಉಗ್ರರು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವುದು ತನಿಖೆಯಿಂದ ಬಯಲಾಗಿದೆ.
ಪ್ರಸ್ತುತ ಎನ್ಐಎ ವಶದಲ್ಲಿರುವ ಈ ಶಂಕಿತರು ಅಂದುಕೊಂಡಂತೆ ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದರೆ ಬೆಂಗಳೂರಿನ ಪ್ರಮುಖ ಸ್ಥಳಗಳು ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ದೊಡ್ಡ ಮಟ್ಟದ ಪೈಶಾಚಿಕ ಕೃತ್ಯ ನಡೆಯುವ ಸಾಧ್ಯತೆ ಇತ್ತು ಎಂದು ತಿಳಿದುಬಂದಿದೆ.
ಬೆಂಗಳೂರಿನ ಪ್ರಮುಖ ಸ್ಥಳಗಳು, ರಾಜ್ಯದ ಪ್ರವಾಸಿ ತಾಣಗಳು, ಅಣೆಕಟ್ಟುಗಳು, ಕೈಗಾ ಅಣುಶಕ್ತಿ ಕೇಂದ್ರ, ಐಟಿಬಿಟಿ, ಶಕ್ತಿಕೇಂದ್ರ ವಿಧಾನಸೌಧ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಸ್ಪೋಟಿಸಲು ಹೊಂಚು ಹಾಕಿದ್ದರು ಎಂದು ಗೊತ್ತಾಗಿದೆ.
ಕಳೆದ ಜೂನ್ 25ರಂದು ಸೋಲದೇವನಹಳ್ಳಿ ಬಳಿ ರೆಹಮಾನ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ಶಂಕಿತ ಆರೋಪದ ಮೇಲೆ ಬಂಧಿಸಿದ್ದರು.ಈತನನ್ನು ವಿಚಾರಣೆಗೊಳಪಡಿಸಿದ ಮೇಲೆ ಪುನಃ ಆಗಸ್ಟ್ 17ರಂದು ನಗರದ ಎರಡು ಕಡೆ ಮತ್ತಿಬ್ಬರನ್ನು ಬಂಧಿಸಲಾಗಿತ್ತು.
2014 ಅಕ್ಟೋಬರ್ 2ರಂದು ಜಮ್ಮುಕಾಶ್ಮೀರದ ಬುದ್ವಾನ್ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಈ ಮೂವರು ಶಂಕಿತರು ಭಾಗಿಯಾಗಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಎನ್ಐಎ ಅಧಿಕಾರಿಗಳು, ಇವರು ಬೆಂಗಳೂರಿಗೆ ಬರುತ್ತಿದ್ದಂತೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಶ್ಮೀರ ಪ್ರಜೆಗಳ ಸೋಗು:
ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆ ಜಮಾತ್ ಉಲ್ ಮುಜಾಯಿದ್ದೀನ್ಗೆ ಸೇರಿದ್ದ ಈ ಶಂಕಿತ ಉಗ್ರರು ಭಾರತದ ನಾನಾ ಕಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಮೊದಲು ಗುಜರಾತ್ಗೆ ತೆರಳಿದ್ದ ಶಂಕಿತರು ಅಹಮದಾಬಾದ್, ಸೂರತ್ ಮತ್ತಿತರ ಕಡೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಆದರೆ ಅಲ್ಲಿ ಭಾರೀ ಭದ್ರತೆ ಇದ್ದ ಕಾರಣ ಇವರ ಯೋಜನೆ ತಲೆಕೆಳಗಾದವು.
ಅಲ್ಲಿಂದ ರೈಲಿನಿಂದ ಮೂಲಕ ಬೆಂಗಳೂರಿಗೆ ಆಗಮಿಸಿದ ಈ ಮೂವರು ನಗರದ ಹೃದಯಭಾಗವೊಂದರಲ್ಲಿ ರೂಮ್ ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದರು.
ಇವರ ಪ್ರತಿಯೊಂದು ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.ತಾವು ಪಾಕ್ ಪ್ರಜೆಗಳೆಂದು ವೀಸಾ ಪಡೆದುಕೊಂಡಿದ್ದ ರೆಹಮಾನ್ ಮತ್ತು ಆತನ ಸಹಚರರ ಬಳಿ ಸ್ಯಾಟಲೈಟ್ ಫೆÇೀನ್, ಬೆಂಗಳೂರಿನ ಪ್ರಮುಖ ತಾಣಗಳು ಹಾಗೂ ರಾಜ್ಯದ ಪ್ರತಿಯೊಂದು ಸ್ಥಳಗಳ ನಕ್ಷೆ ಇಟ್ಟುಕೊಂಡಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ಜೂ.25ರಂದು ಸೋಲನದೇವನಹಳ್ಳಿ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ರೆಹಮಾನ್ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.
ಆತ ನೀಡಿದ ಸುಳಿವಿನ ಮೇರೆಗೆ ಮತ್ತೆ ಕಾರ್ಯಾಚರಣೆಗಿಳಿದ ಅಧಿಕಾರಿಗಳು ರಾಮನಗರ ಹಾಗೂ ದೊಡ್ಡಬಳ್ಳಾಪುರದ ಬಳಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದರು.
ಇವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೆಲವು ಆಘಾತಕಾರಿ ವಿಷಯಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪಾಕಿಸ್ತಾನಕ್ಕೆ ಸ್ಯಾಟ್ಲೈಟ್ ಫೆÇೀನ್ ಮೂಲಕ ದೂರವಾಣಿ ಕರೆ ಹೋಗಿತ್ತು. ಇದಕ್ಕೂ ಎನ್ಐಎ ವಶದಲ್ಲಿರುವ ಶಂಕಿತ ಉಗ್ರರಿಗೂ ಸಾಮ್ಯತೆ ಇದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.