ಎರಡನೇ ದಿನವೂ ಮುಂದುವರೆದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ರವರ ವಿಚಾರಣೆ

ನವದೆಹಲಿ, ಆ.31- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿಚಾರಣೆಯನ್ನು ದೆಹಲಿಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎರಡನೆಯ ದಿನವೂ ಮುಂದುವರೆಸಿದ್ದಾರೆ.
ಇಂದು ಬೆಳಗ್ಗೆ 11.20ಕ್ಕೆ ಲೋಕನಾಯಕ ಭವನದಲ್ಲಿರುವ 6ನೇ ಮಹಡಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ಡಿ.ಕೆ.ಶಿವಕುಮಾರ್ ಎಲ್ಲಾ ದಾಖಲೆಗಳೊಂದಿಗೆ ಹಾಜರಾದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಹೆದರುವ ಪ್ರಶ್ನೆಯೂ ಇಲ್ಲ. ಕಾನೂನಿಗೆ ಗೌರವ ಕೊಡುತ್ತೇನೆ. ವಿಚಾರಣೆ ವೇಳೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಸೂಕ್ಷ್ಮತೆ ಹೊಂದಿದ್ದಾರೆ.ಅವರು ನನಗೆ ಸಹಕಾರ ಕೊಡುತ್ತಿದ್ದಾರೆ, ನಾನೂ ಅವರಿಗೆ ವಿಚಾರಣೆಗೆ ಸಂಬಂಧಪಟ್ಟ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದೇನೆ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ.ವ್ಯವಸ್ಥೆ ಮೇಲೆ ವಿಶ್ವಾಸವಿದೆ. ಹೆದರುವ ಅಗತ್ಯವೇ ಇಲ್ಲ ಎಂದು ಹೇಳಿದರು.
ನಾನು ಹಣಕಾಸು ಮಸೂದೆ ಕಾನೂನಿನ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿದೇಶಗಳಲ್ಲಿ ಬಂಡವಾಳ ಹೂಡಿರುವ ಮಾಹಿತಿ ತಪ್ಪು ಎಂದರು.

ಇದಕ್ಕೂ ಮುನ್ನ ಮನೆಯಿಂದ ಹೊರಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾನೂನಿಗೆ ತಲೆಬಾಗುತ್ತೇನೆ. ತಪ್ಪೇ ಮಾಡಿಲ್ಲ. ತಪ್ಪು ಮಾಡದಿರುವಾಗ ಹೆದರುವ ಅಗತ್ಯವೇನಿದೆ.ನನ್ನನ್ನು ಒಂದು ತಿಂಗಳು ವಿಚಾರಣೆ ನಡೆಸಿದರೂ ಹಾಜರಾಗುತ್ತೇನೆ, ಸಹಕರಿಸುತ್ತೇನೆ. ಇದೇ ದಿನ ವಿಚಾರಣೆ ಮುಗಿಯುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ