ಕೇಂದ್ರದ ತನಿಖಾ ಸಂಸ್ಥೆಗಳ ದುರ್ಬಳಕೆ-ಮಾಜಿ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ, ಆ.31- ಐಟಿ, ಇಡಿ ಸೇರಿದಂತೆ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳ ಮೇಲೆ ದಾಳವನ್ನಾಗಿ ಪ್ರಯೋಗ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಶೇಕಡ ನೂರಕ್ಕೆ ನೂರರಷ್ಟು ಕೇಂದ್ರದ ತನಿಖಾ ಸಂಸ್ಥೆಗಳು ದುರ್ಬಳಕೆಯಾಗುತ್ತಿದೆ.ಯಾರು ಪ್ರಭಾವವಿದ್ದಾರೆ ಅವರ ಮೇಲೆ ಪ್ರಯೋಗಿಸಲಾಗುತ್ತಿದೆ.ಇದು ನಿಲ್ಲಬೇಕು.

ರಮೇಶ್ ಜಾರಕಿಹೊಳಿಯವರು ದೆಹಲಿಯಲ್ಲಿ ಕುಳಿತಿದ್ದಾರೆ. ಗೋಕಾಕ್ ಜನರ ಕಷ್ಟ ಕೇಳಲಿಕ್ಕೆ ಅಲ್ಲಿ ಯಾರೂ ಇಲ್ಲದಂತಾಗಿದೆ.ನಾನು ಯಮಕನಮರಡಿ ಶಾಸಕನಾದರೂ ಗೋಕಾಕ್‍ಗೂ ನನಗೂ ಸಂಬಂಧವಿದೆ.ಅದಕ್ಕೆ ನಾನು ಜನರ ಸಂಕಷ್ಟ ಕೇಳುತ್ತಿದ್ದೇನೆ ಎಂದು ರಮೇಶ್ ವಿರುದ್ಧ ವಾಗ್ಧಾಳಿ ನಡೆಸಿದರು.
ಅವರದೇನೂ ಹೊಸದಲ್ಲ. ಇಂದು ಇಲ್ಲಿ, ನಾಳೆ ಯಡಿಯೂರಪ್ಪ ವಿರುದ್ಧವೂ ಗುಂಪುಗಾರಿಕೆ ಮಾಡುತ್ತಾರೆ.ಮೊದಲಿನಿಂದಲೂ ಅವರು ಜನರ ನಡುವೆ ಬರುವುದಿಲ್ಲ. ಚುನಾವಣಾ ರಾಜಕೀಯ ಮಾತ್ರ ಮಾಡುತ್ತಾರೆ.ಕ್ಷೇತ್ರದಲ್ಲಿ ಇದ್ದು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.ಅದು ಬಿಟ್ಟು ತಿಂಗಳುಗಟ್ಟಲೇ ದೆಹಲಿಯಲ್ಲಿ ಕುಳಿತಿದ್ದು ಸರಿಯಲ್ಲ. ಕೂಡಲೇ ಹಿಂತಿರುಗಬೇಕು ಎಂದು ಹೇಳಿದರು.

ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ನೀಡಿರುವುದರಿಂದ ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಸರ್ಕಾರ ಬೀಳಿಸುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಆದರೂ ಆಗಬಹುದು.ರಾಜಕೀಯದಲ್ಲಿ ಹೀಗೇ ಅಂತಾ ಹೇಳಲು ಸಾಧ್ಯವಿಲ್ಲ. ಭಿನ್ನಮತವಿದೆ. ಮುಂದೆ ಯಾವ ಪರಿಣಾಮ ಬೀರುತ್ತೋ ಕಾದು ನೋಡಬೇಕು.ಸರ್ಕಾರ ಎಷ್ಟು ದಿನ ಇರುತ್ತೆ ಅಂತಾ ಒಂದು ತಿಂಗಳ ನಂತರ ಬಿಜೆಪಿ ಶಾಸಕರೇ ಹೇಳುತ್ತಾರೆ.ಬಿಜೆಪಿ ಭಿನ್ನಮತ ಲಾಭ ಪಡೆಯುವ ಪ್ರಶ್ನೆಯೇ ಇಲ್ಲ. ಮುಂದಿನ ಗುರಿ ಚುನಾವಣೆ ಮಾತ್ರ ಎಂದರು.
ಉಮೇಶ್ ಕತ್ತಿ, ನಾನು ಭೇಟಿಯಾಗುತ್ತಿರುತ್ತೇವೆ. ನಾನು ಹೊಲಗದ್ದೆ ನೋಡ್ಕೊಂಡು ಇರುತ್ತೇನೆ ಎಂದು ಅವರು ಹೇಳಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ