ಬಿಜೆಪಿಯಿಂದ ಉಜ್ವಲ ಯೋಜನೆಯ ದುರುಪಯೋಗ-ಮಾಜಿ ಸಚಿವ ಪ್ರಿಯಾಂಕ್‍ಖರ್ಗೆ

ಕಲಬುರಗಿ, ಆ.31-ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಬಿಜೆಪಿ ಸದಸ್ಯತ್ವ ಪಡೆಯಲು ಬಲವಂತ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‍ಖರ್ಗೆ ಆರೋಪಿಸಿದ್ದಾರೆ.

ಕಲಬುರಗಿಯ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿ ಉಜ್ವಲ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಒಂದು ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ.ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಶಹಭಾಗ ತಾಲೂಕಿನ ಮರತೂರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಾದ ಶಿವಲಿಂಗಣ್ಣ ಬಸವರಾಜ, ಅಶೋಕ ಶಿವಶೇಖರಪ್ಪ, ದತ್ತಾತ್ರೇಯ ಅಪ್ಪಾಸಾಬ, ರಾಜು ದಿಗಂಬರ, ದತ್ತೂಸಿಂಗ್ ಮತ್ತಿತರರು ಚುನಾಯಿತ ಪ್ರತಿನಿಧಿಗಳಲ್ಲದೆ ಇದ್ದರೂ ಬಡ ಫಲಾನುಭವಿಗಳಿಗೆ ಸರ್ಕಾರದ ಉಜ್ವಲ ಯೋಜನೆಯಡಿ ಗ್ಯಾಸ್‍ ಸಿಲಿಂಡರ್‍ಗಳನ್ನು ವಿತರಣೆ ಮಾಡುತ್ತಿದ್ದಾರೆ. ಸ್ಥಳೀಯ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.

ಸರ್ಕಾರದ ಅಧಿಕಾರಿಗಳು ಮತ್ತು ಗ್ಯಾಸ್ ಸಿಲಿಂಡರ್ ವಿತರಕರು ನಿಯಮಾವಳಿಗಳನ್ನು ಮೀರಿ ಒಂದು ಪಕ್ಷದ ಕಾರ್ಯಕರ್ತರ ಕೈಯಿಂದ ಸಿಲಿಂಡರ್‍ಗಳನ್ನು ವಿತರಣೆ ಮಾಡಿಸಿರುವುದು ಶಿಷ್ಟಾಚಾರದ ಉಲ್ಲಂಘನೆ ಆಗಿದೆ. ಕಾನೂನನ್ನು ಗಾಳಿಗೆ ತೂರಿ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಜೊತೆಗೆ ಬಿಜೆಪಿ ಸದಸ್ಯತ್ವವನ್ನೂ ಪಡೆಯುವಂತೆ ಒತ್ತಡ ಹೇರುತ್ತಿರುವುದಾಗ ಆರೋಪಿಸಲಾಗಿದೆ.

ಭಾವಚಿತ್ರಗಳ ಸಮೇತವಾಗಿ ಪ್ರಿಯಾಂಕ್‍ಖರ್ಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಡ ಹೇರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ