ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ-ಮಾಜಿ ಸಚಿವ ಎಚ್.ಡಿ.ರೇವಣ್ಣ

ಹಾಸನ, ಆ.31- ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ನಮ್ಮ ವಿರುದ್ಧ ದ್ವೇಷದ ರಾಜಕಾರಣ ಆರಂಭಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 26ರಂದು ಅವರು ಮುಖ್ಯಮಂತ್ರಿಯಾಗುತ್ತಿ ದ್ದಂತೆ ಮೊದಲು ಕೆಎಂಎಫ್ ಕಡತವನ್ನು ಕೈಗೆತ್ತಿಕೊಂಡಿದ್ದಾರೆ.ರೇವಣ್ಣನನ್ನು ತೆಗೆಯಲೇಬೇಕು ಎಂದು ನಿರ್ಧಾರ ಮಾಡಿದ್ದಾರೆ.ಅಂದು ರಾತ್ರಿ 7.30ರ ವರೆಗೂ ಕೆಲಸ ಮಾಡಿದ್ದಾರೆ.ಸಂಜೆ 5.30ರ ನಂತರ ಸರ್ಕಾರಿ ಕಚೇರಿಯನ್ನು ತೆಗೆಸಿ ಕೆಲಸ ಮಾಡಿದ ಮೊದಲ ಮುಖ್ಯಮಂತ್ರಿ ಬಿಎಸ್‍ವೈ ಎಂದು ಕಿಡಿಕಾರಿದರು.

ಅಧಿಕಾರ ಮುಖ್ಯವಲ್ಲ: ಹಾಲು ಉತ್ಪಾದಕರು ಚೆನ್ನಾಗಿರಬೇಕು, ಅಧಿಕಾರ ಮುಖ್ಯವಲ್ಲ. ಕೆಎಂಎಫ್ ಅಧ್ಯಕ್ಷನಾಗಿ ಯಾವುದೇ ಸವಲತ್ತನ್ನು ನಾನು ಪಡೆದಿಲ್ಲ. ಬಾಲಚಂದ್ರ ಜಾರಕಿಹೊಳಿ ನಮ್ಮಲ್ಲೆ ಇದ್ದವರು. ಅವರು ನನ್ನ ಬಳಿ ಅಧ್ಯಕ್ಷನಾಗುವುದಾಗಿ ಮನವಿ ಮಾಡಿದರು.ನಾಯಕ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ, ಇದು ಸಂತೋಷ ಎಂದು ರೇವಣ್ಣ ಇದೇ ವೇಳೆ ಹೇಳಿದರು.

ಹಿಂದೆ ನಿಗದಿಯಾದ ದಿನಾಂಕದಲ್ಲಿ ಚುನಾವಣೆ ನಡೆದಿದ್ದರೆ ನಾನು ಗೆಲ್ಲುತ್ತಿದ್ದೆ.ಎಲ್ಲ ನಿರ್ದೇಶಕರ ಬೆಂಬಲ ನನಗಿತ್ತು.ಈಗ ಎಲ್ಲ ನಿರ್ದೇಶಕರಿಗೂ ತನಿಖೆ ನಡೆಸುವುದಾಗಿ ಬಿಜೆಪಿಯವರು ಹೆದರಿಸಿದ್ದಾರೆ.ಸಭೆ ನಡೆಯುತ್ತಿದ್ದಾಗಲೇ ಅಧಿಕಾರಿಗೆ ಫೆÇೀನ್ ಮಾಡಿದ್ದರು.ಅಧಿಕಾರಿ ತಕ್ಷಣವೇ ಸಭೆಯಿಂದ ಹೊರನಡೆದರು.ಅಧಿಕಾರಿಯನ್ನು ಹೆದರಿಸಿ ಚುನಾವಣೆ ಮುಂದೂಡಿದರು.ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ದೂರಿದರು.
ಯಾವುದಕ್ಕೂ ಹೆದರಿ ಓಡುವ ಜಾಯಮಾನ ನನ್ನದಲ್ಲ. ಎಲ್ಲವನ್ನೂ ಎದುರಿಸಿಯೇ ರಾಜಕೀಯದಲ್ಲಿ ಉಳಿದಿದ್ದೇನೆ ಎಂದು ಹೇಳಿದ ರೇವಣ್ಣ, ಡೈರಿ ಸೆಕ್ಟರ್‍ನಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೇನೆ.ಈಗ ನಾಯಕ ಸಮಾಜದವರು ಅಧ್ಯಕ್ಷರಾಗಿದ್ದಾರೆ ಕೆಲಸ ಮಾಡಲಿ.ಭೀಮಾನಾಯ್ಕ ಅವರು ಬಂದು ಅಧ್ಯಕ್ಷನಾಗುವಂತೆ ಕೇಳಿದ್ದರು.ಈ ಸನ್ನಿವೇಶದಲ್ಲಿ ಬೇಡ, ನೀನು ಬೇಕಾದರೆ ಅಧ್ಯಕ್ಷನಾಗು ಬೆಂಬಲ ನೀಡುತ್ತೇನೆ ಎಂದಿದ್ದೆ ಎಂದು ತಿಳಿಸಿದರು.

ರಾಜಕೀಯವಾಗಿ ಮುಗಿಸಲು ಯಡಿಯೂರಪ್ಪ ಅವರಿಂದ ಆಗಲ್ಲ. ದೇವರು, ಜನತೆ ಮಾತ್ರ ಮುಗಿಸಲು ಸಾಧ್ಯ. ದೇವೇಗೌಡರು, ಕುಮಾರಸ್ವಾಮಿ, ನಾನು ಎಲ್ಲವನ್ನೂ ಎದುರಿಸಿ ಬಂದಿದ್ದೇವೆ. ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಯಾವುದೇ ಬೇಸರವಿಲ್ಲ. 14 ತಿಂಗಳಲ್ಲಿ ಹಾಸನ ಜಿಲ್ಲೆಗೆ ಏನು ಬೇಕೋ ಎಲ್ಲಾ ಮಾಡಿದ್ದೇನೆ. ಜನತೆ ಆಶೀರ್ವಾದ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ಅದನ್ನು ಬಿಟ್ಟು ಬೇರೆ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.
ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಸಿದ್ದರಾಮಯ್ಯ ಅತ್ಯಂತ ಹಿರಿಯ ರಾಜಕಾರಣಿ.ಈಗ ಸರ್ಕಾರ ಬಿದ್ದು ಹೋಗಿದೆ.ಮಾತನಾಡಿ ಏನೂ ಪ್ರಯೋಜನವಿಲ್ಲ. ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ ಅದರ ಬಗ್ಗೆ ಚಿಂತಿಸುತ್ತೇನೆಯೇ ಹೊರತು ಕನಿಷ್ಠ ಕೆಎಂಎಫ್ ಅಧ್ಯಕ್ಷ ಸ್ಥಾನದ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದರು.

ಹನ್ನೆರಡು ಜಿಲ್ಲೆಯ ಜನ ಬೀದಿಗೆ ಬಿದ್ದಿದ್ದಾರೆ. ಅವರೆಲ್ಲರೂ ಬಿಜೆಪಿಗೆ ಮತ ನೀಡಿದವರು.ಕುಮಾರಸ್ವಾಮಿ ವಿರುದ್ಧ ಮತ ನೀಡಿದವರ ಸಾಲವನ್ನು ಅವರು ಸಿಎಂ ಆಗಿದ್ದಾಗ ಮನ್ನಾ ಮಾಡಿದ್ದಾರೆ.ಬಿಜೆಪಿಯವರೂ ಸಂತ್ರಸ್ತರ ಸಂಪೂರ್ಣ ಸಾಲಮನ್ನಾ ಮಾಡಲಿ ಎಂದು ಸವಾಲು ಹಾಕಿದರು.
ಯಾರು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ.ರಾಜಕಾರಣದಲ್ಲಿ ಡಿಕೆಶಿ ಒಬ್ಬರೇ ಇರುವುದಾ? ಬೇರೆ ಇನ್ನಾರೂ ಇಲ್ಲವಾ ಎಂದು ಪ್ರಶ್ನಿಸಿದ ರೇವಣ್ಣ, ನಾವು ದೇವೇಗೌಡರ ಕುಟುಂಬದಿಂದ ಬಂದವರು.ನನಗೆ ಆಲೂಗೆಡ್ಡೆ ಬಗ್ಗೆ ಗೊತ್ತೇ ಹೊರತು ಐಟಿ, ಇಡಿ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ