ವಿಲೀನ ಪ್ರಕ್ರಿಯೆಗಳಿಂದ ಬ್ಯಾಂಕ್ ವ್ಯವಸ್ಥೆ ಬಲಗೊಳ್ಳುವುದಿಲ್ಲ-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು, ಆ.31-ವಿಲೀನ ಪ್ರಕ್ರಿಯೆಯಿಂದ ಬ್ಯಾಂಕ್‍ಗಳು ಸದೃಢವಾಗುವುದಿಲ್ಲ. ಆರ್ಥಿಕ ವ್ಯವಸ್ಥೆ ಕುಸಿದಿರುವ ಹಿನ್ನೆಲೆಯಲ್ಲಿ ಕೇಂದ್ರದ ಸರ್ಕಾರದ ಈ ನಿರ್ಧಾರ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ 27 ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಸದೃಢಗೊಳಿಸುವುದಾಗಿ ಹೇಳಲಾಗುತ್ತಿದೆ. ವೈಯಕ್ತಿಕವಾಗಿ ಹೇಳುವುದಾದರೆ ವಿಲೀನ ಪ್ರಕ್ರಿಯೆಗಳಿಂದ ಬ್ಯಾಂಕ್ ವ್ಯವಸ್ಥೆ ಬಲಗೊಳ್ಳುವುದಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಆರ್‍ಬಿಐ ಸೇರಿದಂತೆ ಬ್ಯಾಂಕ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಹೆಚ್ಚಾಗಿದೆ. ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದು ಜಿಡಿಪಿ ಶೇ.3.7 ಅಥವಾ 4ರ ನಡುವೆ ಕುಸಿದಿದೆ. ಕೇಂದ್ರ ಸರ್ಕಾರ ಶೇ.5ರಷ್ಟು ಜಿಡಿಪಿ ಬೆಳವಣಿಗೆಯಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಕಳೆದ 6 ವರ್ಷಗಳಲ್ಲಿ ಇದು ಅತ್ಯಂತ ತಳಮಟ್ಟಕ್ಕೆ ಕುಸಿದ ಪ್ರಮಾಣವಾಗಿದೆ.ಮನ್‍ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ದೇಶದ ಜಿಡಿಪಿ ಪ್ರಮಾಣ ಶೇ.8 ರಿಂದ 9ರವರೆಗೆ ಬೆಳವಣಿಗೆಯಾಗಿತ್ತು. ಆದರೆ, ನರೇಂದ್ರ ಮೋದಿಯವರ ನೀತಿಗಳಿಂದಾಗಿ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ