ಕೆಎಂಎಫ್ ನೂತನ ಅಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆ

ಬೆಂಗಳೂರು,ಆ.31- ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್)ಯ ನೂತನ ಅಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬೆಳಗಾವಿ ಜಿಲ್ಲೆ ಅರಬಾವಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಅವರ ವಿರುದ್ಧ ಯಾರೊಬ್ಬರು ನಾಮಪತ್ರ ಸಲ್ಲಿಸದ ಕಾರಣ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್‍ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನವಣಾಧಿಕಾರಿ ಪ್ರಕಟಿಸಿದರು.

ತಮ್ಮ ಬೆಂಬಲಿಗ ನಿರ್ದೇಶಕರೊಂದಿಗೆ ಆಗಮಿಸಿದ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಚುನಾವಣಾಧಿಕಾರಿಯಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಜಾರಕಿಹೊಳಿ ಅವರಿಗೆ ಬೆಂಬಲ ನೀಡಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದರು.ಚುನಾವಣಾಧಿಕಾರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತಾವು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆಯುವುದಾಗಿ ಪತ್ರ ಸಲ್ಲಿಸಿದ್ದರು.
ಚುನಾವಣೆಗೆ ನಿಗದಿಪಡಿಸಿದ ಸಮಯ ಮುಗಿಯುತ್ತಿದ್ದಂತೆ ಚುನಾವಣಾಧಿಕಾರಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

ಈ ಚುನಾವಣೆಗೆ ಬಾಲಚಂದ್ರ ಜಾರಕಿಹೊಳಿ ಹೊರತುಪಡಿಸಿ ಇತರೆ ನಿರ್ದೇಶಕರು ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಚುನಾವಣಾ ಕಣದಲ್ಲಿ ಅವರೊಬ್ಬರೇ ಉಳಿದಿದ್ದರು.
ಪ್ರಬಲ ಆಕಾಂಕ್ಷಿಯಾಗಿದ್ದ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಅವರೂ ಕೂಡ ರೇವಣ್ಣ ಅವರಂತೆ ಜಾರಕಿಹೊಳಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇದೇ ವೇಳೆ ಬೆಂಗಳೂರು ಡೈರಿ ಅಧ್ಯಕ್ಷ ನರಸಿಂಹಮೂರ್ತಿ ಪ್ರತಿಕ್ರಿಯಿಸಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ನಾವೆಲ್ಲ ನಡೆಯುತ್ತಿದ್ದೇವೆ. ಸರ್ಕಾರ ಯಾವುದು ಇದೆಯೋ ಹಾಗೆಯೇ ಕೇಳಿ. ಸಂಸ್ಥೆಯ ಬೆಳವಣಿಗೆ ಮುಖ್ಯ ಎಂದು ಪಕ್ಷದಿಂದ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೆಂಬಲಿಸಿದ್ದೇವೆ ಎಂದು ಹೇಳಿದರು.

13 ಜನ ನಿರ್ದೇಶಕರು ಅವರ ಪರ ಇದ್ದೇವೆ. ಯಾವುದೇ ಆಮಿಷ ಬಿಜೆಪಿ ಒಡ್ಡಿಲ್ಲ. ಮಾರುತಿ ಕಾಶಂಪೂರ್, ಭೀಮಾನಾಯ್ಕ್, ರೇವಣ್ಣ ಮಾತ್ರ ಬೇರೆಯಾಗಿದ್ದಾರೆ. ಉಳಿದಂತೆ ಎಲ್ಲರೂ ಜಾರಕಿಹೊಳಿ ಪರ ಇದ್ದೇವೆ ತಿಳಿಸಿದರು.
ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಾನು ನಾಮಪತ್ರ ಸಲ್ಲಿದ್ದೇನೆ. 13 ನಿರ್ದೇಶಕರು ನನ್ನ ಬಳಿಯಿದ್ದಾರೆ ನನ್ನನ್ನು ಬೆಂಬಲಿಸಿದ್ದಾರೆ.ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ