ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ-ಸಿಎಂ ಭೇಟಿ ರದ್ದು

ಬೆಂಗಳೂರು,ಆ.31- ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಬೇಕಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಉದ್ದೇಶಿತ ಉತ್ತರಕನ್ನಡ ಜಿಲ್ಲೆಯ ಪ್ರವಾಸವನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿದ್ದಾರೆ.

ಬೆಳಗ್ಗೆ ತಿರುಪತಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ಅವರು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳಿದರು. ಅಲ್ಲಿಂದ ಉತ್ತರಕನ್ನಡ ಜಿಲ್ಲೆಯ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲು ತೀರ್ಮಾನಿಸಿದ್ದರು.
ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ಹಿನ್ನಲೆಯಲ್ಲಿ ಜಿಲ್ಲಾಡಳಿತ ಭರ್ಜರಿ ಸಿದ್ದತೆ ಕೈಗೊಂಡಿತ್ತು.ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತಿತರರು ಮುಖ್ಯಮಂತ್ರಿಗಳಿಗೆ ವಸ್ತುಸ್ಥಿತಿ ಮನವರಿಕೆ ಮಾಡಲು ಮುಂದಾಗಿದ್ದರು.

ಮುಖ್ಯಮಂತ್ರಿಗಳು ಇಂದು ಜಿಲ್ಲೆಯ ಯಾವ ಯಾವ ಭಾಗಕ್ಕೆ ಭೇಟಿ ಕೊಡಬೇಕು ಎಂಬುದು ಕೂಡ ನಿರ್ಧಾರವಾಗಿತ್ತು.ಆದರೆ ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ.
ಜಿಲ್ಲಾ ಕೇಂದ್ರ ಕಾರವಾರ, ಶಿರಸಿ, ಸಿದ್ದಾಪುರ, ಕುಮಟ, ಅಂಕೋಲಾ, ಭಟ್ಕಳ ಸೇರಿದಂತೆ ಮತ್ತಿತರ ಕಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಬೆಳಗ್ಗೆಯಿಂದಲೇ ಕಾರವಾರದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಹೆಲಿಕಾಪ್ಟರ್‍ನ್ನು ಸುರಕ್ಷಿತವಾಗಿ ಇಳಿಸಲು(ಲ್ಯಾಂಡ್ ಮಾಡಲು) ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಕಚೇರಿಗೆ ಮಾಹಿತಿ ನೀಡಿದರು.
ಇದರಿಂದ ಬಿಎಸ್‍ವೈ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ತವರು ಜಿಲ್ಲೆ ಶಿವಮೊಗ್ಗದ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು.
ನಂತರ ಶಿವಮೊಗ್ಗದಿಂದ ಹೆಲಿಕಾಪ್ಟರ್ ಮೂಲಕ ಹಾವೇರಿಗೆ ತೆರಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ವಸ್ತುಸ್ಥಿತಿಯನ್ನು ಖುದ್ದು ವೀಕ್ಷಣೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ