ಸಂಕಷ್ಟದಲ್ಲಿರುವ ಉದ್ಯಮಗಳನ್ನು ಉಳಿಸಲು ಸರ್ಕಾರ ಬದ್ಧ-ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ

ಬೆಂಗಳೂರು,ಆ.31- ಸಂಕಷ್ಟದಲ್ಲಿರುವ ಉದ್ಯಮಗಳನ್ನು ಉಳಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಪೀಣ್ಯ ಕೈಗಾರಿಕಾ ಸಂಘ ಮತ್ತು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ 2019 ವಾರ್ಷಿಕ ಉತ್ಕøಷ್ಟ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಜಾಗತೀಕರಣದಿಂದಾಗಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳು ಸಂಕಷ್ಟಕ್ಕೀಡಾಗಿವೆ. ಕೋಟ್ಯಂತರ ಜನರ ಜೀವನೋಪಾಯಕ್ಕೆ ಆಧಾರವಾಗಿರುವ ಎಂಎಸ್‍ಎಂಇ ವಲಯ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ಎದುರಿಸುವಂತಾಗಿದೆ ಎಂದರು.

ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದಿಂದ ಕೈಗಾರಿಕೆಗಳನ್ನು ನಡೆಸುವುದು ಸವಾಲಾಗಿ ಪರಿಣಮಿಸಿದ್ದು, ಉದ್ಯಮಿಗಳು ತತ್ತರಿಸಿ ಹೋಗಿದ್ದಾರೆ ಜತೆಗೆ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲು ಸಂಶೋಧನೆ ಹಾಗೂ ಅಭಿವೃದ್ಧಿಯ ಬಲವಿಲ್ಲ. ಈ ನಿಟ್ಟಿನಲ್ಲಿ ಶ್ರಮಿಕ ವರ್ಗ ಹಾಗೂ ಆರ್ಥಿಕ ಚೇತರಿಕೆಯ ಹಿತದೃಷ್ಟಿಯಿಂದ ಸರ್ಕಾರ ಉದ್ಯಮಿ ಸ್ನೇಹಿಯಾಗಿ ಪ್ರಗತಿಗೆ ಪೂರಕದ ಕ್ರಮಗಳನ್ನು ಕೈಗೊಳ್ಳಲಿದೆ. ಗುಣಮಟ್ಟ ಹೆಚ್ಚಳಕ್ಕೆ ಇಂತಹ ಪ್ರಶಸ್ತಿಗಳು ಉತ್ತೇಜನ ನೀಡುತ್ತವೆ ಎಂದು ಈ ವೇಳೆ ಪ್ರಶಂಸೆ ವ್ಯಕ್ತಪಡಿಸಿದರು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಸುಧಾಕರ್ ಮಾತನಾಡಿ, ದೇಶದ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳು ಪೂರಕವಾಗಿವೆ. ಸುಮಾರು ಹತ್ತು ಕೋಟಿ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡಿವೆ. ಬೆಂಗಳೂರಿನ ಅಭಿವೃದಿಗೆ ಅಪಾರ ಕೊಡುಗೆ ನೀಡಿವೆ, ಪೀಣ್ಯ ಕೈಗಾರಿಕಾ ಪ್ರದೇಶ ಸದ್ಯ ಹದಗೆಟ್ಟಿದ್ದು, ಕೈಗಾರಿಕಾ ವಿಸ್ತರಣೆಗೆ ಯೋಗ್ಯವಾಗಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚಿಸಿದೆ.ಆದಾಗ್ಯೂ ಪರಿಸರ ಸಂರಕ್ಷಣೆ ಜತೆಗೆ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಸಹಕರಿಸುವುದಾಗಿ ತಿಳಿಸಿದರು.

ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷ್ (ಪಿಐಎ) ವಾರ್ಷಿಕ ಎಂಎಸ್‍ಎಂಇ ಎಕ್ಸಲೆನ್ಸ್ ಅವಾಡ್ರ್ಸ್ 2019 ಅನ್ನು ವಿವಿಧ ವಿಭಾಗಗಳಲ್ಲಿ ಪ್ರಕಟಿಸಿದೆ. ಅತ್ಯುತ್ತಮ ಮೈಕ್ರೋ ಎಂಎಸ್‍ಎಂಇ ಪ್ರಶಸ್ತಿ 2019 ಅನ್ನು ಮೇವರಿಕ್ ಫೆಸಿಲಿಟಿ ಮ್ಯಾನೇಜ್‍ಮೆಂಟ್, ಎಲ್‍ಟಿಡಿ ಮತ್ತು ಅತ್ಯುತ್ತಮ ಸಣ್ಣ ಎಂಎಸ್‍ಎಂಇ ಪ್ರಶಸ್ತಿ 2019 ಅನ್ನು ಲಿಯೊನಾರ್ಡೊ ಎಂಜಿನಿಯರಿಂಗ್ ಲಿಮಿಟೆಡ್‍ಗೆ ಲಭಿಸಿದೆ. ವಿವಿಧ ವಿಭಾಗಗಳಲ್ಲಿ ಒಟ್ಟು 50 ಜನರಿಗೆ ಪ್ರಶಸ್ತಿ ನೀಡಲಾಗಿದ್ದು, ಅವರಲ್ಲಿ 6 ಜನರಿಗೆ ಪಿಐಎ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.

ಪಿಐಎ ಅಧ್ಯಕ್ಷ ಎಂ.ಎಂ.ಗಿರಿ, ಯೆಸ್ ಬ್ಯಾಂಕ್ ಉಪಾಧ್ಯಕ್ಷ ಅಶ್ರಫ್.ಕೆ.ಎ, ಕೆನರಾ ಬ್ಯಾಂಕ್ ಜನರಲ ಮ್ಯಾನೇಜರ್ ಲಕ್ಷ್ಮೀನಾರಾಯಣ, ಎಸ್ ಬಿಐ ಡಿಜಿಎಂ ವಿಕಾಶ್ ಗೋಯಲ, ಕಾಸಿಯಾ ಅಧ್ಯಕ್ಷ ರಾಜು, ಯೂಕಾಮ್ ಅಶೋಕ್, ಎಫ್‍ಕೆಸಿಸಿಐ ಅಧ್ಯಕ್ಷ ಜನಾರ್ಧನ್, ಕಾರ್ಯದರ್ಶಿ ಆರಿಫ್ ಎಚ್.ಎಂ.ಪದಾಧಿಕಾರಿಗಳು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ