
ಬೆಂಗಳೂರು, ಆ.26-ಸಚಿವ ಸಂಪುಟ ವಿಸ್ತರಣೆ ನಂತರ ಶಾಸಕರ ಅಸಮಾಧಾನವನ್ನೇ ಶಮ£ಮಾಡಲಾಗದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವೆ ಶೀತಲ ಸಮರ ನಡೆದಿದೆ.
ಡಿಸಿಎಂ ಆಕಾಂಕ್ಷಿಗಳು ಬಹಳಷ್ಟಿರುವುದರಿಂದ ಯಾರಿಗೂ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದು ಬೇಡ ಎಂದು ಸಿಎಂ ಯಡಿಯೂರಪ್ಪನವರು ಪಟ್ಟು ಹಿಡಿದಿದ್ದಾರೆ.
ಆದರೆ ಕನಿಷ್ಠ ಮೂರು ಜನ ಸಚಿವರಿಗೆ ಡಿಸಿಎಂ ಪದವಿ ನೀಡಲೇಬೇಕೆಂದು ಹೈಕಮಾಂಡ್ ಪಟ್ಟುಹಿಡಿದಿದ್ದು, ಇದು ಮುಖ್ಯಮಂತ್ರಿಗಳ ನೆಮ್ಮದಿ ಕೆಡಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಿ ಎರಡನೇ ಹಂತದ ನಾಯಕತ್ವಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡ ಹೇರತೊಡಗಿದೆ.
ಡಿಸಿಎಂ ಹುದ್ದೆಗೆ ಸಾಕಷ್ಟು ಪೈಪೆÇೀಟಿ ಇರುವುದರಿಂದ ಯಾರನ್ನೇ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಿದರೂ ಅದು ಉಳಿದವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಹಾಗಾಗಿ ಡಿಸಿಎಂ ನೇಮಕದ ಉಸಾಬರಿಯೇ ಬೇಡ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ವಾದ ಮುಂದಿಟ್ಟಿದ್ದಾರೆ.
ಆದರೆ ಇದಕ್ಕೆ ಬಿಜೆಪಿ ಹೈಕಮಾಂಡ್ ಸಹಮತ ವ್ಯಕ್ತಪಡಿಸುತ್ತಿಲ್ಲ ಎನ್ನಲಾಗಿದೆ.ಮಾಜಿ ಡಿಸಿಎಂಗಳಾದ ಆರï.ಅಶೋಕ್, ಕೆ.ಎಸ್.ಈಶ್ವರಪ್ಪ ಡಿಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.ಇವರ ಜತೆಗೆ ಗೋವಿಂದ ಕಾರಜೋಳ ಅವರಿಗೆ ದಲಿತ ಕೋಟಾದಲ್ಲಿ, ನೂತನ ಸಚಿವ ಆರ್.ಅಶ್ವತ್ಥ ನಾರಾಯಣ ಅವರಿಗೆ ಒಕ್ಕಲಿಗ ಕೋಟಾದಲ್ಲಿ, ಲಕ್ಷ್ಮಣ ಸವದಿಗೆ ಲಿಂಗಾಯತ ಕೋಟಾದಲ್ಲಿ ನೀಡುವಂತೆ ಸಿಎಂ ಮೇಲೆ ಒತ್ತಡ ಇದೆ ಎನ್ನಲಾಗುತ್ತದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ ನೀಡಿದ ಆಶ್ವಾಸನೆಯಂತೆ ವಾಲ್ಮೀಕಿ ಸಮುದಾಯದ ನಾಯಕರಾದ ತಮಗೆ ಉಪ ಮುಖ್ಯಮಂತ್ರಿ ಜವಾವ್ದಾರಿ ನೀಡಬೇಕೆಂದು ಸಚಿವ ಶ್ರೀರಾಮುಲು ಒತ್ತಡ ಹಾಕುತ್ತಿದ್ದಾರೆ. ಈ ಬೆಳವಣಿಗೆ ನಡುವೆ ವಾಲ್ಮೀಕಿ ಸಮುದಾಯದ ಶ್ರೀಗಳು ಸಹ ತಮ್ಮ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಲೇಬೇಕೆಂದು ಆಗ್ರಹಪಡಿಸುತ್ತಿದ್ದಾರೆ.
ಇವರಲ್ಲದೆ ಭವಿಷ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಅನರ್ಹ ಶಾಸಕರು ಸಚಿವರಾದರೆ ಅವರಲ್ಲಿ ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ್ ಸಹ ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
ಡಿಸಿಎಂ ಹುದ್ದೆ ಹೆಚ್ಚಿನ ಅಧಿಕಾರ ಕೇಂದ್ರಗಳನ್ನು
ಸೃಷ್ಟಿಸುವುದರಿಂದ ಸುಗಮ ಆಡಳಿತಕ್ಕೆ ಅಡಚಣೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ವಾದಿಸುತ್ತಿದ್ದಾರಾದರೂ ಹೈಕಮಾಂಡ್ ಈ ವಾದವನ್ನು ಕೇಳುತ್ತಿಲ್ಲ ಎನ್ನಲಾಗಿದೆ.
ಈ ವಿದ್ಯಮಾನದಿಂದ ಹೈಕಮಾಂಡ್ ಆದೇಶಕ್ಕೆ ಒಪ್ಪಿ ಡಿಸಿಎಂ ಜವಾಬ್ದಾರಿಯನ್ನು ಸಚಿವರಿಗೆ ನೀಡಿದರೆ ಮತ್ತೊಂದು ಅಸಮಾಧಾನ ಎದುರಿಸಬೇಕಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಚಿಂತೆಗೀಡಾಗಿದ್ದಾರೆಂದು ಹೇಳಲಾಗುತ್ತದೆ.