ರಾಜ್ಯಕ್ಕೆ ಕೇಂದ್ರದಿಂದ ಸೂಕ್ತ ಪರಿಹಾರ ಸಿಗಲಿದೆ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಆ.26-ರಾಜ್ಯದಲ್ಲಿ ಇತ್ತೀಚೆಗೆ ಅತಿವೃಷ್ಠಿಯಿಂದಹಾನಿ ಉಂಟಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಇನ್ನೆರಡು ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ. ರಾಜ್ಯಕ್ಕೆ ಕೇಂದ್ರದಿಂದ ಸೂಕ್ತ ಪರಿಹಾರ ಸಿಗಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೇಂದ್ರದತಂಡ ನಿನ್ನೆ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ಹಾನಿಯಾಗಿರುವ ಬಗ್ಗೆ ಸಾರ್ವಜನಿಕರು ಮತ್ತು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇಂದು ಮತ್ತು ನಾಳೆ ಇನ್ನು ಕೆಲವು ಕಡೆ ಭೇಟಿ ನೀಡಲಿದ್ದಾರೆ.

ನಮಗೆ ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಆರ್ಥಿಕ ನೆರವು ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಖಾಸಗಿ ಹೊಟೇಲ್‍ನಲ್ಲಿ ನಡೆದ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್‍ಎಕ್ಸ್‍ಪೆÇೀ-2019 ಕಾರ್ಯಕ್ರಮ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಂಟು ರಾಜ್ಯಗಳಲ್ಲಿ ನೆರೆ ಉಂಟಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ದೇಶದ ಯಾವುದೇ ರಾಜ್ಯಕ್ಕೂ ಕೇಂದ್ರದ ಅಧ್ಯಯನ ತಂಡ ಆಗಮಿಸಿಲ್ಲ. ಕರ್ನಾಟಕಕ್ಕೆ ಮಾತ್ರ ಭೇಟಿ ಕೊಟ್ಟಿದ್ದಾರೆ. ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಅಧಿಕಾರಿಗಳು ಕೇಂದ್ರಕ್ಕೆ ವರದಿ ಸಲ್ಲಿಸುವರು. ಬಳಿಕ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಪ್ರತಿಪಕ್ಷಗಳು ಆರೋಪಿಸಿರುವಂತೆ ಕೇಂದ್ರಸರ್ಕಾರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿಲ್ಲ. ನಮಗೆ ಎಲ್ಲಾ ರೀತಿಯ ನೆರವು ಸಿಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವರದಿ ನೀಡಲಾಗಿದೆ. ಗೃಹ ಸಚಿವರಾದ ಅಮಿತ್ ಷಾ, ಹಣಕಾಸು ಸಚಿವರಾದ ನಿರ್ಮಲಾಸೀತಾರಾಮನ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಕೇಂದ್ರದಿಂದ ನಮಗೆ ಅಗತ್ಯ ನೆರವು ಸಿಕ್ಕಿದೆ.ಪ್ರತಿಪಕ್ಷಗಳು ಬೇಕಾಬಿಟ್ಟಿ ಆರೋಪ ಮಾಡುವುದು ಸರಿಯಲ್ಲ ಎಂದು ಸಿಎಂ ಆಕ್ಷೇಪಿಸಿದರು.
ನೆರೆ ಪರಿಹಾರ ಕುರಿತಂತೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಚಿವರಿಗೆ ನೂತನ ಖಾತೆಗಳ ಹಂಚಿಕೆ ಬಗ್ಗೆ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು. ಸಂಜೆಯೊಳಗೆ ನಿಮಗೆ ಎಲ್ಲವೂ ತಿಳಿಯಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ