ಬೆಂಗಳೂರು, ಆ. 26- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಂದು ತಿಂಗಳಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಏಕಚಕ್ರಾಧಿಪತ್ಯದ ಆಡಳಿತ ಮುಂದುವರೆದಿದೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಮೇಲೆ ಕಾರಣವಿಲ್ಲದ ಆರೋಪಗಳನ್ನು ಮಾಡುತ್ತಿದ್ದ ಯಡಿಯೂರಪ್ಪ ಅವರು, ಮುಖ್ಯಮಂತ್ರಿಯಾಗಿ ತಿಂಗಳಾದರೂ ಇನ್ನು ಪೂರ್ಣಪ್ರಮಾಣದ ಸರ್ಕಾರ ರಚನೆ ಮಾಡಲು ಸಾಧ್ಯವಾಗದಿರುವುದು ಆಡಳಿತ ವೈಫಲ್ಯದ ಸಂಕೇತ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜರಕಾಲದಲ್ಲಿ ಮಾತ್ರ ಏಕಚಕ್ರಾಧಿಪತ್ಯ ಆಡಳಿತ ಎಂಬುದನ್ನ ಇತಿಹಾಸದಲ್ಲಿ ಓದಿದ್ದೆವು. ಬಿಜೆಪಿ ನಮ್ಮ ರಾಜ್ಯಕ್ಕೆ ಯಡಿಯೂರಪ್ಪ ಅವರ ಏಕಚಕ್ರಾಧಿಪತ್ಯದ ಆಡಳಿತವನ್ನು ನೀಡುವ ಮೂಲಕ ಜನತಂತ್ರದಲ್ಲೂ ಇದು ಸಾಧ್ಯ ಎಂಬುದನ್ನು ರುಜುವಾತು ಮಾಡಿದೆ ಎಂದು ಟೀಕಿಸಿದರು.
ಕರ್ನಾಟಕ ಇತಿಹಾಸದಲ್ಲಿ ಈ ರೀತಿ ಆಡಳಿತ ನಡೆದ ನಿದರ್ಶನವಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ತಿಂಗಳು ಕಳೆದಿದೆ. ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿ ವಾರ ಕಳೆದರೂ ಇನ್ನು ಖಾತೆ ಹಂಚಿಕೆ ಬಿಕ್ಕಟ್ಟು ಬಗೆಹರಿದಿಲ್ಲ. ಈ ರೀತಿ ಬಿಜೆಪಿ ಆಡಳಿತದಿಂದ ರಾಜ್ಯದ ಜನತೆಗೆ ಅನಾನುಕೂಲವಾದರು ಯಡಿಯೂರಪ್ಪ ಅವರು ಸಂತೋಷವಾಗಿದ್ದಾರೆ.ಏಕವ್ಯಕ್ತಿ ಆಡಳಿತದ ಮೂಲಕ ಯಡಿಯೂರಪ್ಪ ಅವರು ಸಮೃದ್ಧಿಯಾಗಿ ಊಟ ಮಾಡುತ್ತಿದ್ದಾರೆ. ಬಿಜೆಪಿ ಅಥವಾ ಸಂಘ ಪರಿವಾರ ಪೂರ್ಣಪ್ರಮಾಣದ ಸಚಿವ ಸಂಪುಟ ರಚನೆ ಅಥವಾ ಖಾತೆಗಳ ಹಂಚಿಕೆ ಮುಖಾಂತರ ಮುಖ್ಯಮಂತ್ರಿಯ ಸಮೃದ್ಧಿಯ ಭೋಜನಕ್ಕೆ ಅಡೆ-ತಡೆ ಮಾಡುವುದಿಲ್ಲ ಎಂದು ನಂಬಿರುತ್ತೇನೆ. ಕರ್ನಾಟಕದ ಸಮಸ್ಯೆಗಳು ಬಿಜೆಪಿ ಪಕ್ಷದ ಆದ್ಯತೆಗಳು ಆಗದಿರುವುದರಿಂದ ಯಾರ ಹಂಗೂ ಇಲ್ಲದೆ ಏಕಚಕ್ರಾಧಿಪತ್ಯದ ಆಡಳಿತದ ಒಂದು ತಿಂಗಳು ಇತಿಹಾಸದ ಪುಟ ಸೇರಿದೆ. ಇದಕ್ಕಾಗಿ ಯಡಿಯೂರಪ್ಪ ಅವರನ್ನು ಅಭಿನಂದಿಸುವುದಾಗಿ ವ್ಯಂಗ್ಯವಾಡಿದರು.