ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ

ಬೆಂಗಳೂರು, ಆ.26- ಬರಪೀಡಿತ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಗುಡ್ಡೇಗೌಡ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ಮೊದಲ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ. ಇದರಿಂದ ಮಳೆಯಾಗದೆ ತಾಲ್ಲೂಕಿನ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ.ಆದ್ದರಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಬೇಕು, ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಅನಿವಾರ್ಯವಾಗಲಿದೆ ಎಂದರು.
ನಾಮಕಾವಸ್ಥೆಗೆ ಕಾಳಜಿ ತೋರಿಸುವ ಜನಪ್ರತಿನಿಧಿಗಳನ್ನು ಗ್ರಾಮಗಳಿಗೆ ಬಿಟ್ಟುಕೊಳ್ಳದೆ ರೈತರನ್ನು ಕಡೆಗಣಿಸುವವರ ವಿರುದ್ಧ ಪಕ್ಷಭೇದ ಮರೆತು ಸಂಘಟಿತ ಹೋರಾಟ ನಡೆಸಬೇಕು ಎಂದು ನೆರೆದಿದ್ದ ರೈತರಿಗೆ ಇದೇ ವೇಳೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮಾತನಾಡಿ, ರೈತರ ಕಲ್ಯಾಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೂಪಿಸಿರುವ ಯೋಜನೆಗಳ ಲಾಭ ಪಡೆಯಲು ರೈತರು ಸಂಘಟಿತರಾಗಿ ಹೋರಾಟ ಮಾಡಬೇಕು ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಮಾರಿಕೊಳ್ಳಬೇಡಿ ಎಂದರು.
ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ವಿಶ್ವ ಪ್ರಸಿದ್ದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಮಾಗಡಿ ಹಿಂದುಳಿದ ತಾಲ್ಲೂಕಾಗಿರುವುದು ದುರ್ದೈವ. ತಾಲ್ಲೂಕಿನ ಜನತೆ ಇನ್ನಾದರೂ ಎಚ್ಚೆತ್ತುಕೊಂಡು ಜನಪರ, ರೈತಪರ ಕಾಳಜಿಯುಳ್ಳವರನ್ನು ಆರಿಸಿ ಎಂದು ಹೇಳಿದರು.
ವಕೀಲ ಅಂಜನಮೂರ್ತಿ, ಪರ್ತಕರ್ತರಾದ ಮಾರಣ್ಣ, ಶ್ರೀನಿವಾಸ್ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಉದ್ಯಮಿ ಡಾ.ಬಿ.ಎಸ್.ವಿಶ್ವಕಾರ್ಯಪ್ಪ, ಮಾಗಡಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್.ಕೃಷ್ಣಮೂರ್ತಿ, ವೇದಿಕೆಯ ಗೌರವಾಧ್ಯಕ್ಷ ಚಕ್ರಬಾವಿ ಭೆರಪ್ಪ, ಕಾರ್ಯಾಧ್ಯಕ್ಷ ಕೆ.ಶಿವರಾಮ್ , ಮುಖಂಡರಾದ ತಗ್ಗಿಕುಪ್ಪೆ ಮುಕುಂದ, ಮೊದಲಾದವರು ವೇದಿಕೆಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ