ಮ್ಯಾನ್‍ಹೋಲ್ ಒಳಗೆ ಸ್ವಚ್ಚತಾ ಕಾಮಗಾರಿಯ ವೇಳೆ ಐವರ ಸಾವು

ನವದೆಹಲಿ, ಆ.23- ಮ್ಯಾನ್‍ಹೋಲ್ ಒಳಗೆ ಸ್ವಚ್ಚತಾ ಕಾಮಗಾರಿಯಲ್ಲಿ ತೊಡಗಿದ್ದ ನಾಲ್ವರು ಕಾರ್ಮಿಕರು ಮತ್ತು ಅವರ ಮೇಲ್ವಿಚಾರಕ ಉಸಿರುಗಟ್ಟಿ ಸಾವನ್ನಿಪ್ಪಿರುವ ದುರ್ಘಟನೆ ರಾಜಧಾನಿ ದೆಹಲಿಯ ಘಾಜಿಯಾಬಾದ್‍ನಲ್ಲಿ ಸಂಭವಿಸಿದೆ.

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಥ ದುರ್ಘಟನೆಗಳು ಮರುಕಳುಹಿಸುತ್ತಿರುವಾಗಲೇ ಮತ್ತೊಂದು ದುರಂತ ಸಂಭವಿಸಿದ್ದ ಪೌರಕಾರ್ಮಿಕ ವಲಯ ಆತಂಕಗೊಂಡಿದೆ.

ಘಾಜಿಯಾಬಾದ್‍ನ ನಂದಗ್ರಾಮ್‍ನ ಕೃಷ್ಣ ಕುಂಜ್‍ನಲ್ಲಿ ನಿನ್ನೆ ಅಪರಾಹ್ನ 14 ಅಡಿಗಳಷ್ಟು ಆಳದ ಮ್ಯಾನ್‍ಹೋಲ್ ಒಳಗೆ ಸ್ವಚ್ಚತಾ ಕಾಮಗಾರಿಯಲ್ಲಿ ತೊಡಗಿದ್ದ ಈ ಐವರು ಉಸಿರುಗಟ್ಟಿ ಅಸುನೀಗಿದ್ದಾರೆ.

ಮೃತಪಟ್ಟವರನ್ನು ದಾಮೋದರ್(40), ಹೊರಿಳ್(35), ಸಂದೀಪ್(30), ಶಿವಕುಮಾರ್(32) ಹಾಗೂ ಅವರ ಮೇಲ್ವಿಚಾರಕ ಜಯ್‍ಕುಮಾರ್(40) ಎಂದು ಗುರುತಿಸಲಾಗಿದೆ.

ಈ ಪ್ರದೇಶದಲ್ಲಿ ಒಳಚರಂಡಿ ಮಾರ್ಗ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಕಾಮಗಾರಿಗಾಗಿ ಒಂದೂವರೆ ಅಡಿ ಅಗಲದ ಮ್ಯಾನ್‍ಹೋಲ್‍ಗೆ ಸಂಪರ್ಕ ಕಲ್ಪಿಸಲು ಇವರು ಕಾರ್ಯನಿರ್ವಹಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಪುನರುತ್ಥಾನ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಯೋಜನೆ(ಅಮೃತ್) ಅಡಿ ಖಾಸಗಿ ಗುತ್ತಿಗೆದಾರರ ಮೂಲಕ ಉತ್ತರ ಪ್ರದೇಶ ನಿಗಮ್‍ನಿಂದ ದೆಹಲಿಗೆ ಸಮೀಪದಲ್ಲಿ ಈ ಕಾಮಗಾರಿ ನಡೆಯುತ್ತಿತ್ತು.

ಈ ಸಂಬಂಧ ನಿಗಮದ ನಾಲ್ಕು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ