ಮಂದಿನ ತಿಂಗಳು ಭಾರತಕ್ಕೆ ಆಗಮಿಸಲಿರುವ ರಫೇಲ್ ಯುದ್ಧ ವಿಮಾನಗಳು

ನವದೆಹಲಿ/ಫ್ಯಾರಿಸ್, ಆ.23- ಭಾರತ ಮತ್ತು ಫ್ರಾನ್ಸ್ ನಡುವಣ ಮಹತ್ವ ರಕ್ಷಣಾ ಒಪ್ಪಂದದ ಭಾಗವಾಗಿ ಬಹುನಿರೀಕ್ಷಿತ ಅತ್ಯಧುನಿಕ ರಫೇಲ್ ಪೈಟರ್ ಜೆಟ್‍ಗಳು ಮುಂದಿನ ತಿಂಗಳು ಭಾರತೀಯ ವಾಯುಪಡೆ ಬತ್ತಳಿಕೆಗೆ ಸೇರ್ಪಡೆಯಾಗಲಿವೆ.

ತೀವ್ರ ವಿವಾದ ಸೃಷ್ಟಿಸಿದ್ದ ಫ್ರಾನ್ಸ್‍ನ ರಫೇಲ್ ಯುದ್ಧ ವಿಮಾನ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದೆ. ಭಾರತೀಯ ವಾಯುಪಡೆಗೆ 36 ರಫೇಲ್ ಯುದ್ಧ ವಿಮಾನಗಳನ್ನು ಬರಮಾಡಿಕೊಳ್ಳಲು ಮುಂದಿನ ತಿಂಗಳು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಪ್ಯಾರಿಸ್‍ಗೆ ಪ್ರಯಾಣ ಬೆಳೆಸಲಿದ್ದಾರೆ.

ರಫೇಲ್ ಯುದ್ಧ ವಿಮಾನ ತಯಾರಿಸಿದ ಫ್ರಾನ್ಸ್‍ನ ಡಸ್ಸೌಲ್ಟ್ ವಿಮಾನಯಾನದ ಹಿರಿಯ ಅಧಿಕಾರಿಗಳು ಮತ್ತು ಮಿಲಿಟರಿಯ ಉನ್ನತ ಅಧಿಕಾರಿಗಳು ಯುದ್ಧ ವಿಮಾನದ ಹಸ್ತಾಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಈ ಸಮಾರಂಭ ಸೆ. 20ರಂದು ನಡೆಯಲಿದೆ.

ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾರತ-ಫ್ರಾನ್ಸ ನಡುವಣ ರಕ್ಷಣಾ ಸಹಕಾರ ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ.

ಸುಮಾರು 58 ಸಾವಿರ ಕೋಟಿ ರೂಪಾಯಿ ವೆಚ್ಚದ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಭಾರತ ಸರ್ಕಾರ 2016ರ ಸೆಪ್ಟೆಂಬರ್‍ನಲ್ಲಿ ಫ್ರಾನ್ಸ್ ಸರ್ಕಾರದೊಂದಿಗೆ ಅಂತರ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.

ರಫೇಲ್ ಯುದ್ಧ ವಿಮಾನ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿಗಳನ್ನು ಯುದ್ಧದ ವೇಳೆ ಹೊತ್ತೊಯ್ಯಬಲ್ಲ ಸಾಮಥ್ರ್ಯ ಹೊಂದಿರುತ್ತದೆ. ಈ ಯುದ್ಧ ವಿಮಾನ ಚಲಾಯಿಸಲು ಭಾರತೀಯ ವಾಯುಪಡೆಯ ಪೈಲಟ್‍ಗಳಿಗೆ ಬೇಕಾದ ತರಬೇತಿ ಮತ್ತು ಮೂಲಭೂತ ಸೌಕರ್ಯಗಳನ್ನು ಈಗಾಗಲೇ ನೀಡಲಾಗಿದೆ.

ಮೊದಲ ರಫೇಲ್ ಯುದ್ಧ ವಿಮಾನವನ್ನು ಹರ್ಯಾಣ ರಾಜ್ಯದ ಅಂಬಾಲಾ ವಾಯುನೆಲೆಯಲ್ಲಿ ನಿಯೋಜಿಸಲು ಭಾರತೀಯ ವಾಯುಪಡೆ ಸಿದ್ಧತೆ ಮಾಡಿಕೊಂಡಿದೆ.

ಸುಮಾರು 220 ಕಿ. ಮೀ. ವ್ಯಾಪ್ತಿಯನ್ನು ಹೊಂದಿರುವ ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ರಫೇಲ್ ಯುದ್ಧ ವಿಮಾನದ ಎರಡನೇ ಸ್ಕ್ವಾಡ್ರನ್ ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆಯಲ್ಲಿ ಬೀಡುಬಿಡಲಿದೆ. ಈ ಎರಡೂ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಬೇಕಾದ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಭಾರತೀಯ ವಾಯುಪಡೆ ಸುಮಾರು 400 ಕೋಟಿ ರೂಪಾಯಿ ಖರ್ಚು ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ