ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾಗಲು ಅನರ್ಹ ಶಾಸಕರೇ ಕಾರಣ. ಈ ಅನರ್ಹ ಶಾಸಕರ ಬೆಂಬಲದಿಂದಲೇ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂಬುದು ಸತ್ಯದ ಸಂಗತಿ. ಆದರೀಗ, ಅದೇ ಅನರ್ಹ ಶಾಸಕರ ಸ್ಥಿತಿ ಆಯೋಮಯವಾಗಿದೆ. ಇಂದು ಹೈಕಮಾಂಡ್ ಜತೆಗೆ ಖಾತೆ ಹಂಚಿಕೆ ಹಾಗೂ ಅತೃಪ್ತ ಶಾಸಕರ ಬಗ್ಗೆ ಮುಖ್ಯಮಂತ್ರಿ ಚರ್ಚೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅತೃಪ್ತ ಶಾಸಕರು ಕೂಡ ಉಪಸ್ಥಿತರಿರಲಿದ್ದಾರೆ ಎನ್ನಲಾಗುತ್ತಿದೆ.
ಇತ್ತಿಚೆಗೆ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹತೆ ಆದೇಶ ಪ್ರಶ್ನಿಸಿ ಅತೃಪ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಅತೃಪ್ತ ಶಾಸಕರ ಪರವಾಗಿ ಹೋರಾಡಲು ವಕೀಲರನ್ನ ಭೇಟಿ ಮಾಡಿಸಿ, ರೂಪರೇಷೆ ಸಿದ್ದಪಡಿಸಲು ಬಿಜೆಪಿಯೇ ಸಹಾಯ ಮಾಡಿತ್ತು. ಮಾಜಿ ಸಿಎಂ ಸಿ.ಪಿ ಯೋಗಿಶ್ವರ್ ಇವರಿಗೆ ಸಾಥ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಹೈ ಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದೆ.
ನಿನ್ನೆ ತಡರಾತ್ರಿಯೇ ದೆಹಲಿಗೆ ತೆರಳಿರುವ ಬಿಎಸ್ವೈ ಇಂದು ಅನರ್ಹ ಶಾಸಕರನ್ನ ಕರ್ನಾಟಕ ಭವನದಲ್ಲಿ ಭೇಟಿ ಮಾಡಲಿದ್ದಾರೆ. ಈ ವೇಳೆ ಅಮಿತ್ ಶಾ ಅಥವಾ ಜೆ.ಪಿ ನಡ್ಡಾ ಅನರ್ಹ ಶಾಸಕರ ಭೇಟಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಇಲ್ಲಿ ಸುಪ್ರೀಂಕೋರ್ಟ್ನಲ್ಲಿರುವ ಅನರ್ಹತೆ ಪ್ರಕರಣ ಕುರಿತು ಬಿಜೆಪಿ ಹೈಕಮಾಂಡ್ಗೆ ಮನವಿ ಸಲ್ಲಿಸಲಿದ್ದಾರೆ. ಈ ಸಂಬಂಧ ಕಾನೂನು ಹೋರಾಟಕ್ಕೆ ಪಕ್ಷದ ಬೆಂಬಲ ಕೇಳಲಾಗುತ್ತದೆ. ಇದಾದ ಬಳಿಕ 2ನೇ ಆದ್ಯತೆ ಪಕ್ಷದಲ್ಲಿ ನಮಗೇನು ಸ್ಥಾನಮಾನ ನೀಡುವ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನುತ್ತಿವೆ ಮೂಲಗಳು.
ಇನ್ನು ಈ ಕುರಿತು ಮಾತನಾಡಿರುವ ವಿಶ್ವನಾಥ್, ಕೋರ್ಟ್ ಕೇಸ್ ಹಿನ್ನೆಲೆ ದೆಹಲಿಗೆ ಆಗಮಿಸಿದ್ದೇವೆ. ವಕೀಲರ ಜೊತೆ ಚರ್ಚೆ ನಡೆಸಲಿದ್ದೇವೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಊರಲ್ಲಿ ಇಲ್ಲ. ಅಮಿತ್ ಶಾ ಬಂದ ಬಳಿಕ ಭೇಟಿಗೆ ಸಮಯ ಕೇಳುತ್ತೇವೆ ಎಂದಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಅನರ್ಹತೆ ಪ್ರಕರಣ ಇರುವ ಹಿನ್ನೆಲೆ ಅವರಿಗೆ ಯಾವುದೇ ಸ್ಥಾನಮಾನದ ಭರವಸೆ ನೀಡಿಲ್ಲ. ಒಂದು ವೇಳೆ ಅವರು ಹೈ ಕಮಾಂಡ್ ಭೇಟಿಯಾದರೂ ಅವರಿಗೆ ಯಾವುದೇ ಲಾಭ ಇಲ್ಲ ಎಂಬ ಮಾತು ಕೇಳಿ ಬಂದಿದೆ.