ಅನರ್ಹರ ಅರ್ಜಿ ವಿಚಾರಣೆ ಮಧ್ಯಾಹ್ನ2 ಗಂಟೆಗೆ ಮುಂದೂಡಿದ ಸುಪ್ರೀಂ

ನವದೆಹಲಿ : ಕಾಂಗ್ರೆಸ್​-ಜೆಡಿಎಸ್​ ಪಕ್ಷದ 17 ಅನರ್ಹ ಶಾಸಕರ ಪ್ರಕರಣದ ಕುರಿತಾದ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಇಂದು ಮತ್ತೆ ಕೈಗೆತ್ತಿಕೊಂಡಿದೆ. ಈ ನಡುವೆ ಕರ್ನಾಟಕ ಉಪ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ್ದು, ಸೆಪ್ಟೆಂಬರ್.30 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಪ್ರಕರಣ ಕುರಿತ ತೀರ್ಪನ್ನು ಬಹುತೇಕ ಇಂದೇ ನೀಡುವ ಸಾಧ್ಯತೆ ಇದ್ದು, ಕೋರ್ಟ್​ ನೀಡುವ ತೀರ್ಪಿನ ಮೇಲೆ ಅನರ್ಹ ಶಾಸಕರ ಭವಿಷ್ಯವನ್ನು ನಿರ್ಧಾರವಾಗಲಿದೆ.

ಕಳೆದ ಮೇ ತಿಂಗಳಲ್ಲಿ ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಐಶಾರಾಮಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು. ಇದಾದ ಬೆನ್ನಲ್ಲೇ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ ಸಿಪಿಎಲ್​ ನಾಯಕ ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ನಾಯಕ ಅಂದಿನ ಸಿಎಂ ಕುಮಾರಸ್ವಾಮಿ ದೂರಿನ ಮೇರೆಗೆ ವಿಚಾರಣೆ ನಡೆಸಿ ಎಲ್ಲಾ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

ಸ್ಪೀಕರ್ ಆದೇಶದಿಂದ ವಿಚಲಿತರಾದ ಅನರ್ಹ ಶಾಸಕರು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದರು. ಬುಧವಾರ ಮೊದಲ ಬಾರಿಗೆ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಬಹುತೇಕ ಇಂದೇ ತೀರ್ಪು ನೀಡುವ ಎಲ್ಲಾ ಸೂಚನೆಗಳು ಕಂಡುಬರುತ್ತಿದೆ.

ಕೆಲವು ಸತ್ಯವನ್ನು ಕೋರ್ಟ್ ಮುಂದೆ ಇಡಲಿದ್ದೇನೆ ಎಂದು ವಾದ ಆರಂಭಿಸಿದ ಕೆಪಿಸಿಸಿ ಪರ ವಕೀಲ ಕಪಿಲ್​ ಸಿಬಲ್​, “ಅನರ್ಹರು ಮೊದಲು ತರಾತುರಿಯಲ್ಲಿ ರಾಜೀನಾಮೆ ನೀಡಿದ್ದರು. ಅನರ್ಹರ ರಾಜೀನಾಮೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ರಾಜೀನಾಮೆ ನೀಡಿದ ಬಳಿಕ ಅವರು ರಾಜ್ಯಪಾಲರನ್ನು ಭೇಟಿಯಾಗಿ ನಂತರ ಮುಂಬೈಗೆ ವಾಸ್ಯವ್ತ ಬದಲಿಸಿದ್ದರು. ಈ ವೇಳೆ ಅವರ ಜೊತೆ ಬಿಜೆಪಿಯ ರಾಜ್ಯಸಭಾ ಸದಸ್ಯರೊಬ್ಬರಿದ್ದರು. ಹೀಗೆ ರಾಜೀನಾಮೆ ಕೊಟ್ಟವರು ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿದರು. ಮುಂಬೈನ ಐಶಾರಾಮಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು. ಇದಕ್ಕೆಲ್ಲಾ ಹಣ ಎಲ್ಲಿಂದ ಬಂತು? ಯಾರು ಕೊಟ್ಟಿದ್ದು?,” ಎಂದು ಪ್ರಶ್ನೆ ಮಾಡಿದ್ದಾರೆ.

“ಮುಂಬೈನಲ್ಲಿದ್ದ ಶಾಸಕರನ್ನು ಬಿಜೆಪಿ ನಾಯಕರು ಭೇಟಿಯಾಗಿದ್ದಾರೆ. ರಾಜೀನಾಮೆ ನೀಡಿದ ಶಾಸಕರ ನಡೆ ನಿಗೂಢವಾಗಿತ್ತು. 190/3 ಬಿ ಪ್ರಕಾರ ರಾಜೀನಾಮೆ ಸ್ವಯಂಪ್ರೇರಿತ ಮತ್ತು ನೈಜವಾಗಿರಬೇಕು. ಸ್ಪೀಕರ್ ಈ ಅಂಶವನ್ನು ಪರಿಶೀಲಿಸಿ ಸರಿ ತಪ್ಪು ಲೆಕ್ಕ ಹಾಕಿ ತೀರ್ಪು ನೀಡಿದ್ದಾರೆ. ಅಷ್ಟಕ್ಕೂ 17 ಶಾಸಕರ ಬಗ್ಗೆ ಈ ಮೊದಲೇ ಕಾಂಗ್ರೆಸ್​ ದೂರು ನೀಡಿತ್ತು. ಜುಲೈ 10ಕ್ಕೆ ಶಾಸಕರ ವಿರುದ್ಧ ದೂರು ದಾಖಲಾಗಿದೆ . ಇದನ್ನು ನೋಡಿದರೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ ಎನ್ನಬಹುದೇ? ನಿಜಕ್ಕೂ ಸರ್ಕಾರದ ನಡೆಯಿಂದ ಬೇಸತ್ತಿದ್ರಾ ಅನ್ನೋದು ಪ್ರಶ್ನೆ?

“ಸ್ಪೀಕರ್​ಗೆ ಸಂವಿಧಾನ ಮತ್ತು ಸದನ ನಿಯಮ ಗೊತ್ತಿರುತ್ತದೆ. ಸರಿ ತಪ್ಪು ಅವಲೋಕಿಸಯೇ 17 ಜನರನ್ನ ಅನರ್ಹ ಮಾಡಿದ್ದಾರೆ. ಅನರ್ಹಗೊಳಿಸುವುದು ಸ್ಪೀಕರ್ ಅವರ ಸಾಂವಿಧಾನಿಕ ಹಕ್ಕು. ರಾಜೀನಾಮೆ ಸ್ವಯಂಪ್ರೇರಿತವೋ, ಇಲ್ಲವೋ? ಅಥವಾ ರಾಜೀನಾಮೆ ನೈಜವೋ, ಇಲ್ಲವೋ? ಎಲ್ಲವನ್ನೂ ಪರಿಶೀಲಿಸುವುದು ಸ್ಪೀಕರ್ ಹಕ್ಕು ಮತ್ತು ಕರ್ತವ್ಯ. ಆರ್ಟಿಕಲ್​ 226ರಲ್ಲಿ ಸ್ಪೀಕರ್​ ಆದೇಶವನ್ನ ಪ್ರಶ್ನಿಸಬಹುದು. ಆದರೆ, ಅನರ್ಹ ಶಾಸಕರು ನೇರವಾಗಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಈ ನಿಯಮಾವಳಿ ಅನರ್ಹ ಶಾಸಕರಿಗೆ ಗೊತ್ತಿರಲಿಲ್ಲವೇ?,” ಎಂಬ ಮಹತ್ವದ ಅಂಶವನ್ನು ಕಪಿಲ್ ಸಿಬಲ್ ನ್ಯಾಯಾಲಯದ ಮುಂದಿರಿಸಿದ್ದಾರೆ.

“ರಾಜೀನಾಮೆ ಕೊಟ್ಟವರು ಕ್ಷೇತ್ರಕ್ಕೆ ಹೋಗದೇ ಮುಂಬೈಗೆ ಹೋಗುತ್ತಾರೆ. ಬೆಂಗಳೂರಿಗೆ ಬರದೇ ಮುಂಬೈನಿಂದ ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕುತ್ತಾರೆ. ಇದೆಲ್ಲವನ್ನೂ ಸ್ಪೀಕರ್​ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣಗಳಲ್ಲಿ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ. ಹಿಂದಿನ ಪ್ರಕರಣಗಳಲ್ಲೂ ಇದು ಸಾಬೀತಾಗಿದೆ,” ಎಂದು ಕಪಿಲ್ ಸಿಬಲ್ ತಮ್ಮ ವಾದ ಮಂಡಿಸಿದ್ದಾರೆ.

ಕಪಿಲ್ ಸಿಬಲ್ ವಾದಕ್ಕೆ ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ಆಕ್ಷೇಪಣೆ ವ್ಯಕ್ತಪಡಿಸಿದರು. “ನನ್ನ ವಾದದ ನಡುವೆ ಮಧ್ಯ ಬರಬೇಡಿ. ನೀವು ವಾದ ಮಾಡುವಾಗ ನಾನು ಸಹಕರಿಸಲಿಲ್ಲವೇ?,” ಎಂದು ಪ್ರಶ್ನಿಸಿದರು.

ಅನರ್ಹಗೊಂಡ ಶಾಸಕರು ರಾಜೀನಾಮೆ ನೀಡಿದ ಪ್ರಕ್ರಿಯೆ ಸರಿ ಇರಲಿಲ್ಲ ಎಂದಿರುವ ಸಿಬಲ್​, “ಸುಪ್ರೀಂಕೋರ್ಟ್ ಸೂಚನೆ ನೀಡದ ಬಳಿಕ ಸ್ಪೀಕರ್ ಕೈಗೆ ಅನರ್ಹಗೊಂಡಿರುವ ಶಾಸಕರು ರಾಜೀನಾಮೆ ನೀಡಿದ್ದಾರೆ. ಅದಕ್ಕೂ ಮೊದಲು ನಿಯಮಗಳನ್ನು ಉಲ್ಲಂಘಿಸಿ ಮನ ಬಂದಂತೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಲು ಕೆಲವು ಪ್ರಕ್ರಿಯೆಗಳಿವೆ. ರಾಜೀನಾಮೆ ನೀಡುವವರೆಲ್ಲರೂ ಆ ನಿಯಮಗಳನ್ನು ಪಾಲಿಸಲೇಬೇಕು,” ಎಂದು ಬಲವಾದ ವಾದ ಮಂಡಿಸಿದರು. ಈಗ ಪ್ರಕರಣದ ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಲ್ಪಟ್ಟಿದೆ.

ಸುಪ್ರೀಂ ಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇದೆ. ಸ್ಪೀಕರ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಒಂದು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲ್ಲ. ಇದು ಅನರ್ಹರನ್ನು ಆತಂಕಕ್ಕೆ ಈಡು ಮಾಡಿತ್ತು. ಇಂದಾದರೂ ಸುಪ್ರಿಂನಲ್ಲಿ ತೀರ್ಪು ಬರುವ ನಿರೀಕ್ಷೆಯಲ್ಲಿ ಅನರ್ಹರಿದ್ದಾರೆ.

ಅನರ್ಹ ಶಾಸಕರ ಪ್ರಕರಣದ ವಿಚಾರಣೆಯನ್ನು ಜಸ್ಟೀಸ್​. ಮೋಹನ್ ಶಾಂತನಗೌಡರ ನಡೆಸಬೇಕಿತ್ತು. ಆದರೆ, ಅವರು ಕರ್ನಾಟಕ ಮೂಲದವರು ಮತ್ತು ಅನರ್ಹ ಶಾಸಕ ಬಿಸಿ ಪಾಟೀಲ್​ ಅವರ ದೂರದ ಸಂಬಂಧಿ. ಹೀಗಾಗಿ ಸ್ವಇಚ್ಛೆಯಿಂದ ಅವರು ವಿಚಾರಣೆಯಿಂದಲೇ ಹಿಂದೆ ಸರಿದಿದ್ದರು. ಹೀಗಾಗಿ ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಕೃಷ್ಣ ಮುರಳಿ, ಸಂಜಯ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ