ನವದೆಹಲಿ: ಕೇಂದ್ರ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ(66) ಅವರ ಆರೋಗ್ಯ ವಿಚಾರಿಸಲು ಏಮ್ಸ್ ಆಸ್ಪತ್ರೆಯತ್ತ ಬಿಜೆಪಿ ನಾಯಕರು ದೌಡಾಯಿಸುತ್ತಿದ್ದಾರೆ. ಇಂದು ಭಾನುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರು ಏಮ್ಸ್ಗೆ ಭೇಟಿ ನೀಡಿದರು. ಅಲ್ಲದೇ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್, ಕೇಂದ್ರ ಸಚಿವ ಹರ್ಷ್ ವರ್ದನ್, ಕಾಂಗ್ರೆಸ್ನ ಅಭಿಶೇಕ್ ಮನು ಸಿಂಘ್ವಿ, ಜ್ಯೋತಿರಾದಿಯಾ ಸಿಂಧ್ಯಾ, ಏರ್ ಛೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವ್ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಜೇಟ್ಲಿಯವರ ಆರೋಗ್ಯವನ್ನು ವಿಚಾರಿಸಿದರು. ಇದೇ ಆಗಸ್ಟ್ 9ರಂದು ಜೇಟ್ಲಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಗೃಹ ಸಚಿವ ಅಮೀತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೂಡ ಭೇಟಿಯಾಗಿ ಜೇಟ್ಲಿಯವರ ಯೋಗ ಕ್ಷೇಮದ ಬಗ್ಗೆ ಕೇಳಿದ್ದರು.
ಮೂಲಗಳ ಪ್ರಕಾರ ಜೇಟ್ಲಿ ಅವರ ಶ್ವಾಸಕೋಶದಲ್ಲಿ ನೀರು ತುಂಬಿದೆ. ಇದೇ ಕಾರಣದಿಂದ ಅವರಿಗೆ ಉಸಿರಾಡಲು ಸಮಸ್ಯೆಯಾಗುತ್ತಿದೆ. ಶ್ವಾಸಕೋಶದಿಂದ ನೀರನ್ನು ಹೊರಗೆ ತೆಗೆಯುತ್ತಿದ್ದೇವೆ. ಆದರೂ ಮರಳಿ ತುಂಬಿಕೊಳ್ಳುತ್ತಿದೆ. ಹೀಗಾಗಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಮೂಲಗಳು ತಿಳಿಸಿವೆ.
ಜೇಟ್ಲಿಯವರು ಬಹಳ ವರ್ಷಗಳಿಂದ ಮಧುಮೇಹ ಪೀಡಿತರಾಗಿದ್ದು, ಅವರಿಗೆ ಕಿಡ್ನಿ ಕಸಿಯನ್ನು ಸಹ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅವರಿಗೆ ಸಾಫ್ಟ್ ಟಿಸ್ಯೂ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಗಿತ್ತು. ಸ್ಥೂಲಕಾಯದಿಂದ ಮುಕ್ತಿ ಪಡೆಯಲು ಅವರು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೂ ಸಹ ಒಳಗಾಗಿದ್ದರು.
66 ವರ್ಷದ ಹಿರಿಯ ನಾಯಕ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಈ ಬಾರಿ ಲೋಕಸಭಾ ಚುನಾವಣೆಯನ್ನೆದುರಿಸಿರಲಿಲ್ಲ. ಬಿಜೆಪಿ ಭಾರಿ ಬಹುಮತದಿಂದ ಗೆದ್ದ ಬಳಿಕ ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಬೇಡಿ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ವಿನಂತಿಸಿದ್ದರು.