ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಪೋನ್ ಟ್ಯಾಪಿಂಗ್ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ಜೊತೆಗೆ ಸಿಐಡಿ ತನಿಖೆಗೂ ಆದೇಶಿಸಿದೆ. ಈ ಮೊದಲು ಸಿಎಂ ಬಿ.ಎಸ್.ಯಡಿಯೂರಪ್ಪ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಮಾತ್ರ ಆದೇಶ ನೀಡಿದ್ದರು. ಬಳಿಕ ಎರಡು ರೀತಿಯ ತನಿಖೆಗೆ ಆದೇಶಿಸಿರುವ ಬಿಎಸ್ವೈ, ಸಿಬಿಐ ಜೊತೆಗೆ ಸಿಐಡಿ ತನಿಖೆಗೂ ಆದೇಶ ನೀಡಿದ್ದಾರೆ.
ಕಮೀಷನರ್ ಭಾಸ್ಕರ್ ರಾವ್ ಅವರ ಆಡಿಯೋ ಲೀಕ್ ಆಗಿದ್ದರ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ. ಫೋನ್ ಕದ್ದಾಲಿಕೆ ಆಗಿದ್ದ ಆಡಿಯೋ ಲೀಕ್ ಆಗಿದ್ದು ಹೇಗೆ ಎಂಬುದರ ಬಗ್ಗೆ ಕೂಡ ತನಿಖೆ ನಡೆಯಲಿದೆ ಎನ್ನಲಾಗಿದೆ. ಎಡಿಜಿಪಿ ದರ್ಜೆ ಅಧಿಕಾರಿ ಸಿಐಡಿ ಚರಣ್ ರೆಡ್ಡಿ ನೇತೃತ್ವದಲ್ಲಿ ಆಡಿಯೋ ಲೀಕ್ ಬಗ್ಗೆ ತನಿಖೆ ನಡೆಯಲಿದೆ. ಕಮೀಷನರ್ ಕಚೇರಿಯಿಂದ ಆಡಿಯೋ ಹೇಗೆ ಲೀಕ್ ಆಯ್ತು ಎಂಬುದರ ಬಗ್ಗೆ ಸಿಐಡಿ ತನಿಖೆ ಮಾಡಲಿದೆ.
ಸಿಐಡಿ ತನಿಖೆ ಆದ ಬಳಿಕ ಎರಡನೇ ಆವೃತ್ತಿಯಲ್ಲಿ ಸಿಬಿಐ ತನಿಖೆ ನಡೆಯಲಿದೆ. ಈ ಹಿಂದಿನ ರಾಜ್ಯ ಸರ್ಕಾರ ಮಾಡಿರುವ ಫೋನ್ ಕದ್ದಾಲಿಕೆ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ. ಹಿಂದಿನ ಸರ್ಕಾರದ ವಿರೋಧ ಪಕ್ಷದ ನಾಯಕರು, ಶಾಸಕರು, ಅತೃಪ್ತ ಶಾಸಕರ ಪೋನ್ ಕದ್ದಾಲಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ, ಎರಡು ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಸಿಐಡಿ ಫೋನ್ ಕದ್ದಾಲಿಕೆ ಪ್ರಕರಣವನ್ನು ಭೇದಿಸಲಿವೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿದ್ದವರೇ ಈ ಫೋನ್ ಕದ್ದಾಲಿಕೆಯ ಹಿಂದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸರ್ಕಾರ ವಿರುದ್ಧವಾಗಿ ಯಾರ್ಯಾರು ಪಿತೂರಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಿಎಂ ಕುಮಾರಸ್ವಾಮಿ ಅವರೇ ಈ ಎಲ್ಲರ ಫೋನ್ಗಳನ್ನು ಟ್ಯಾಪ್ ಮಾಡಿಸಿದ್ದಾರೆ ಎಂಬ ಆರೋಪ ಕೂಡ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದು ನ್ಯೂಸ್18 ಕನ್ನಡ ವರದಿ ಬಿತ್ತರ ಮಾಡಿತ್ತು.