ಹಸಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದ ಮೇಯರ್

ಬೆಂಗಳೂರು,ಆ.17- ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಘೋಷ ವಾಕ್ಯದೊಂದಿಗೆ ಇನ್ನು ಮುಂದೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಉತ್ಪತ್ತಿಯಾಗುವ ಹಸಿ, ಒಣ ತ್ಯಾಜ್ಯವನ್ನು ಆವರಣದಲ್ಲೇ ಸಂಸ್ಕರಣೆ ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣವನ್ನು ಜೀರೋವೆಸ್ಟ್ ಕ್ಯಾಂಪಸ್ ಮಾಡುವ ಯೋಜನೆಗೆ ಪಾಲಿಕೆ ಆವರಣದಲ್ಲಿರುವ ಗಾಜಿನ ಮನೆ ಹಿಂಭಾಗದಲ್ಲಿ ನಿರ್ಮಿಸಿರುವ ಹಸಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಬಿಎಂಪಿ ಕೇಂದ್ರ ಕಚೇರಿ, ಕೌನ್ಸಿಲ್ ಕಟ್ಟಡ ಸೇರಿ ನಾಲ್ಕುಕಟ್ಟಡಗಳು, ಉದ್ಯಾನ, ಕ್ಯಾಂಟಿನ್ ಹಾಗೂ ರಸ್ತೆಯಿಂದ ಪ್ರತಿ ನಿತ್ಯ 50ರಿಂದ 60 ಟನ್ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.ಇದನ್ನು 70ಕೆಜಿ ಸಾಮಥ್ರ್ಯದ ಎರಡು ಸಂಸ್ಕರಣಾ ಬಿನ್‍ಗಳಲ್ಲಿ ಹಾಕಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ದೇವಸ್ಥಾನದಲ್ಲಿ ಸಂಗ್ರಹವಾಗುವ ಹೂವನ್ನು ಅಲ್ಲೇ ಸಂಸ್ಕರಿಸಲು ಕಾಂಪೆÇೀಸ್ಟರ್ ಅಳವಡಿಸಲಾಗಿದೆ. ಇನ್ನು ಕಚೇರಿಯಲ್ಲಿ ಸಂಗ್ರಹವಾಗುವ ಒಣ ಕಸವನ್ನು ಚಿಂದಿ ಆಯುವವರು ವಾರಕ್ಕೊಮ್ಮೆ ಸಂಗ್ರಹಿಸಿ ಒಣ ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯಲಿದ್ದಾರೆ ಎಂದು ಹೇಳಿದರು.

ಪಾಲಿಕೆ ಆವರಣದಲ್ಲಿ 134 ವಿಭಾಗೀಯ ಕಚೇರಿಗಳಿದ್ದು, ಎಲ್ಲಾ ಕಚೇರಿಗಳಿಗೂ ಹಸಿ ತ್ಯಾಜ್ಯ ಸಂಗ್ರಹಕ್ಕೆ ಹಸಿರು ಬಣ್ಣದ ಡಬ್ಬಿ, ಒಣ ಕಸ ಸಂಗ್ರಹಕ್ಕೆ ನೀಲಿ ಬಣ್ಣದ ಡಬ್ಬಿಗಳನ್ನು ವಿತರಿಸಲಾಗುತ್ತದೆ.ಜತೆಗೆ ಎಲ್ಲಾ ಶೌಚಾಲಯಗಳಲ್ಲೂ ಸ್ಯಾನಿಟರಿ ಕಸ ಸಂಗ್ರಹಕ್ಕೆ ಕೆಂಪು ಬಣ್ಣದ ಡಬ್ಬಿ ಇಡಲಾಗುವುದು. ಇಲ್ಲೂ ಕೂಡ ಎಲ್ಲರೂ ಕಸವನ್ನು ವಿಂಗಡಿಸಿಯೇ ಕೊಡಬೇಕು ಎಂದರು.

ಪೌರಕಾರ್ಮಿಕರಿಗೆ ಈ ಕುರಿತು ತರಬೇತಿ ನೀಡಲಾಗಿದ್ದು, ಕಚೇರಿ ಸಿಬ್ಬಂದಿಗಳಿಗೂ ಕಸ ವಿಂಗಡಿಸಿಕೊಡುವಂತೆ ಸೂಚನೆ ನೀಡಲಾಗಿದೆ.ಇಲ್ಲಿ ಸಂಗ್ರಹವಾಗುವ ಕಸವನ್ನು ನಮ್ಮ ಆವರಣದಲ್ಲೇ ಸಂಸ್ಕರಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದ ಮೇಯರ್, ನಂತರ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಇದೇ ಮಾದರಿ ಅನುಸರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಹಸಿ, ಒಣ , ಸ್ಯಾನಿಟರಿ ಕಸ ವಿಂಗಡಣೆ ಮಾಡಲು ಪಾಲಿಕೆಯ ಎಲ್ಲಾ ಕಚೇರಿಗಳಿಗೆ ಡಬ್ಬಿಗಳನ್ನು ವಿತರಿಸಲಾಗುತ್ತದೆ. ಈ ಬಗ್ಗೆ ಸಿಬ್ಬಂದಿಗಳಿಗೆ ಕರ ಪತ್ರ ನೀಡಿ ಅರಿವು ಮೂಡಿಸಲಾಗುತ್ತದೆ.ಅಲ್ಲದೆ, ಕಚೇರಿ ಮುಖ್ಯಸ್ಥರಿಗೆ ಸಮರ್ಪಕವಾಗಿ ಕಸ ವಿಂಗಡಣೆ ಮಾಡಿಕೊಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಒಂದು ವೇಳೆ ಕಸ ವಿಂಗಡಿಸಿ ಕೊಡದಿದ್ದರೆ ಆಯಾ ಮುಖ್ಯಸ್ಥರೇ ನೇರ ಹೊಣೆ ಹಾಗೂ ಕಸ ವಿಂಗಡಿಸಿಕೊಡದಿದ್ದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಕಚೇರಿಗಳಲ್ಲಷ್ಟೇ ಅಲ್ಲ, ಮನೆಗಳಲ್ಲೂ ಕಸ ಸಂಸ್ಕರಣೆ ಮಾಡಿದರೆ ನಗರದಲ್ಲಿ ಕಸದ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ