ಅನ್ನಭಾಗ್ಯ ಹಾಗೂ ಇಂದಿರಾಕ್ಯಾಂಟಿನ್ ಮುಂದುವರೆಸಬೇಕು-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆ.17- ನಮ್ಮ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಹಾಗೂ ಇಂದಿರಾಕ್ಯಾಂಟಿನ್‍ಗೆ ಕತ್ತರಿ ಹಾಕಿದರೆ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಆಧ್ಯತಾ ಕಾರ್ಯಕ್ರಮಗಳಾಗಿರುವ ಅನ್ನಭಾಗ್ಯ ಹಾಗೂ ಇಂದಿರಾಕ್ಯಾಂಟಿನ್ ಮುಂದುವರೆಸಬೇಕು. ಅನುದಾನ ಕಡಿಮೆ ಮಾಡುವುದು ಅಥವಾ ಕೊರತೆ ಮಾಡಿದರೆ ಸದನದ ಒಳ, ಹೊರಗೆ ಹೋರಾಟ ಮಾಡಲಾವುದು ಎಂದು ಎಚ್ಚರಿಸಿದರು.

ರಾಜ್ಯದ ಸುಮಾರು ನಾಲ್ಕು ಕೋಟಿ ಬಡ ಜನರಿಗೆ ಅನುಕೂಲವಾಗಲಿದೆ ಎಂದು ಒಬ್ಬರಿಗೆ 7 ಕೆಜಿ ಅಕ್ಕಿ ನೀಡಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಈ ಯೋಜನೆ ಮುಂದುವರೆದಿತ್ತು.ಆದರೆ, ಕಿಸಾನ್ ಸಮ್ಮಾನ್ ಯೋಜನೆಗೆ ಹಣಹೊಂದಿಸಲು ಅನ್ನಭಾಗ್ಯ ಯೋಜನೆಯಲ್ಲಿ ಕಡಿತ ಮಾಡಲು ಚರ್ಚೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ.ಒಂದು ವೇಳೆ ಬಡವರಿಗೆ ನೀಡುವ ಏಳು ಕೆಜಿ ಅಕ್ಕಿಯಲ್ಲಿ ಕಡಿಮೆ ಮಾಡಿದರೆ ಸುಮ್ಮನಿರುವುದಿಲ್ಲ ಎಂದರು.

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 6ಸಾವಿರ, ರಾಜ್ಯ ಸರ್ಕಾರ 4 ಸಾವಿರ ಸೇರಿ ಒಟ್ಟು 10ಸಾವಿರ ರೂ. ನೀಡುತ್ತಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಬಡವರಿಗೆ ನೀಡುವ ಅಕ್ಕಿ ಕಡಿತಗೊಳಿಸಿ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ನೀಡುವುದು ಸರಿಯಲ್ಲ. ಬೇರೆ ಮೂಲಗಳಿಂದ ಈ ಯೋಜನೆಗೆ ಹಣ ಹೊಂದಿಸಿಕೊಳ್ಳಬೇಕು.ನಾವು ಅಧಿಕಾರಕ್ಕೆ ಬಂದರೆ ಒಬ್ಬರಿಗೆ 10 ಕೆಜಿ ಅಕ್ಕಿ ನೀಡಬೇಕೆಂದು ತೀರ್ಮಾನ ಮಾಡಿದ್ದೆವು. ಅಕ್ಕಿ ಕಡಿತ ಮಾಡುವ ಚಿಂತನೆ ಇದ್ದರೆ ಕೂಡಲೇ ರಾಜ್ಯ ಸರ್ಕಾರ ಕೈ ಬಿಡಬೇಕು.ಇಲ್ಲದಿದ್ದರೆ ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡಲಿದೆ ಎಂದು ಹೇಳಿದರು.

ಬೆಂಗಳೂರಿನ 190ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ಇಂದಿರಾಕ್ಯಾಂಟಿನ್ ಆರಂಭಿಸಲಾಗಿದೆ.ಬಡವರಿಗೆ ರಿಯಾಯ್ತಿ ದರದಲ್ಲಿ ಆಹಾರ ನೀಡುವ ಕಾರ್ಯಕ್ರಮ ಇದಾಗಿದೆ.ಈ ಯೋಜನೆಗೆ ರಾಜ್ಯ ಸರ್ಕಾರವೇ ಹಣ ಒದಗಿಸಬೇಕು.ರಾಜ್ಯದ ಇತರೆ ನಗರ-ಪಟ್ಟಣಗಳಲ್ಲಿ 248 ಇಂದಿರಾಕ್ಯಾಂಟಿನ್ ಪ್ರಾರಂಭಿಸಲು ಮಂಜೂರಾತಿ ನೀಡಲಾಗಿತ್ತು. ಕೂಡಲೇ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಬೇಕು.ಜನಸಂದಣಿ ಹೆಚ್ಚಿರುವ ಕಡೆ, ಆಸ್ಪತ್ರೆ, ನಿಲ್ದಾಣಗಳು ಮುಂತಾದ ಕಡೆ ಇಂದಿರಾಕ್ಯಾಂಟಿನ್ ಪ್ರಾರಂಭಿಸಬೇಕು. ಇಂದಿರಾ ಕ್ಯಾಂಟಿನ್ ನಿರ್ವಹಣೆಯನ್ನು ಬಿಬಿಎಂಪಿಗೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ