ಕೆ.ಆರ್​.ಎಸ್ ಜಲಾಶಯ​ ಭರ್ತಿ, 2ಲಕ್ಷ ಕ್ಯೂಸೆಕ್​ ನೀರು ಬಿಡುವ ಸಾಧ್ಯತೆ; ಪ್ರವಾಹ ಭೀತಿಯಲ್ಲಿ ಜನರು

ಮಂಡ್ಯಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೆ.ಆರ್​.ಎಸ್​ ಅಣೆಕಟ್ಟು  ಸಂಪೂರ್ಣವಾಗಿ ತುಂಬಿದೆ. ಈ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು ಬೆಳಗ್ಗೆ ಭರ್ತಿಯಾಗಲು ಕೇವಲ ಒಂದು ಅಡಿ ಬಾಕಿ ಇತ್ತು. ಈಗ 124 ಅಡಿ ತುಂಬಿದ್ದು, ಕಾವೇರಿ ನದಿಪಾತ್ರದ ಜನರಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.

ಕೊಡಗಿನಲ್ಲಿ ವ್ಯಾಪಕ ಮಳೆಯಾದ ಕಾರಣ ಒಂದೇ ವಾರದಲ್ಲಿ ಕೆಆರ್​ಎಸ್​ ಜಲಾಶಯ ಭರ್ತಿಯಾಗಿದೆ. ಇನ್ನೂ ಸುಮಾರು 2 ಲಕ್ಷ ಕ್ಯೂಸೆಕ್​ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಮತ್ತಷ್ಟು ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ಪ್ರಸ್ತುತ 1.60 ಲಕ್ಷ ಕ್ಯೂಸೆಕ್​ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ.

ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾದರೆ, ನದಿಗೆ 2 ಲಕ್ಷ ಕ್ಯೂಸೆಕ್​ ನೀರು ಬಿಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಕೆಆರ್​ಎಸ್​ ಜಲಾಶಯದಿಂದ ಹೆಚ್ಚಿನ ನೀರು ಬಿಡಗಡೆ ಹಿನ್ನೆಲೆ, ಮಂಡ್ಯ ಜಿಲ್ಲೆಯ ಶ್ರೀರಂಗಪಪಟ್ಟಣದಲ್ಲಿರುವ ನಿಮಿಷಾಂಭ ದೇಗುಲ ಸಂಪೂರ್ಣ ಜಲಾವೃತವಾಗಿದೆ. ದೇವಾಲಯದ ರಸ್ತೆಯೂ ಬಂದ್​ ಆಗಿದೆ. ದೇವಾಲಯದ ಪ್ರಾಂಗಣದಲ್ಲಿನ ಅಂಗಡಿಗಳು ಜಲಾವೃತವಾಗಿವೆ.

ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಸಂಗ್ರಹಿಸಿಟ್ಟಿದ್ದ ಕಲ್ಲು, ಮರಳು ಕೊಚ್ಚಿಹೋಗಿದೆ. ದೇವಾಲಯದ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ದೇಗುಲ ಕೂಡ ಜಲಾವೃತವಾಗಿದೆ.

ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಹಿನ್ನಲೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಸಂಪೂರ್ಣ ಜಲಾವೃತವಾಗಿದೆ. ಪಶ್ಚಿಮವಾಹಿನಿ ಧಾರ್ಮಿಕ‌ ವಿಧಿ ವಿಧಾನಗಳನ್ನ‌ ಪೂರೈಸುವ ಸ್ಥಳವಾಗಿದೆ. ಪ್ರವಾಹದಿಂದ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಸ್ಥಗಿತವಾಗಿವೆ. ಪಶ್ಚಿಮವಾಹಿನಿಯ ಜನವಸತಿ ಪ್ರದೇಶದ ಮನೆಗಳಿಗೂ ಪ್ರವಾಹದ ನೀರು ನುಗ್ಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ