ನವದೆಹಲಿ, ಆ. 12- ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಇಂದು ದೇಶಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಬಾಂಧವರು ಸಾರ್ವಜನಿಕ ಮೈದಾನಗಳಲ್ಲಿ ಸೇರಿ ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಶ್ರದ್ಧೆಯಿಂದ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರ ದಾಳಿ ಆತಂಕದ ನಡುವೆಯೇ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸೇನಾಪಡೆಗಳ ರಕ್ಷಣೆ ನಡುವೆ ಶ್ರೀನಗರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಕಶ್ಮೆರೆ ಗೇಟ್ನಲ್ಲಿರುವ ಪಂಜಾ ಶರೀಫ್ ದರ್ಗಾದಲ್ಲಿ ಸಾರ್ವಜನಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ದೆಹಲಿಯ ಜಮಾ ಮಸೀದಿಯಲ್ಲಿ ಜನರು ನಮಾಜ್ನಲ್ಲಿ ಸಹೋದರ ಭಾತೃತ್ವದಿಂದ ಪಾಲ್ಗೊಂಡಿದ್ದರು.ಮಧ್ಯ ಪ್ರದೇಶದ ಭೋಪಲ್ನಲ್ಲಿ ಈದ್ಗಾ ಮಸೀದಿಯಲ್ಲಿ ಸಾರ್ವಜನಿಕ ಪ್ರಾರ್ಥನೆಯಲ್ಲಿ ಜನರು ಭಾಗವಹಿಸಿದ್ದರು.
ಮುಂಬೈಯ ಹಮಿದಿಯಾ ಮಸೀದಿ ಹೊರಗೆ ಜನರು ನಮಾಜ್ನಲ್ಲಿ ಭಾಗವಹಿಸಿದ್ದು ಕಂಡುಬಂತು.
ದೇಶದ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಶುಭಾಶಯ ತಿಳಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೇಶವಾಸಿಗಳಿಗೆ ಈದ್ ಹಬ್ಬದ ಶುಭಾಶಯಗಳು, ಈದ್ ನ ಜುಹಾ ಪ್ರೀತಿ, ಭ್ರಾತೃತ್ವ ಮತ್ತು ಮಾನವೀಯತೆಯ ಸೇವೆಯನ್ನು ಸಂಕೇತಿಸುತ್ತದೆ. ನಮ್ಮ ಸಂಯೋಜಿತ ಸಂಸ್ಕøತಿಯನ್ನು ಪ್ರತಿನಿಧಿಸುವ ಈ ಸಾರ್ವತ್ರಿಕ ಮೌಲ್ಯಗಳಿಗೆ ನಾವು ಬದ್ಧರಾಗೋಣ ಎಂದು ಸಂದೇಶ ಹೇಳಿದ್ದಾರೆ.
ಉಪರಾಷ್ಟ್ರಪತಿ ಎಮ್.ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ರಾಜನಾಥ್ಸಿಂಗ್, ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್ ಮೊದಲಾದವರು ಈದ್-ಅಲ್-ಆಧಾ ಪ್ರಯುಕ್ತ ಮುಸ್ಲಿ ಬಾಂಧವರಿಗೆ ಶುಭ ಕೋರಿದ್ದಾರೆ.
ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನ್ಸಿಂಗ್, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಗುಲಾಂ ನಬೀ ಆಜಾದ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮತ್ತು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮುಸ್ಲಿಂ ಬಾಂಧವರಿಗೆ ಶುಭಕೋರಿದ್ದಾರೆ.