ಬೆಂಗಳೂರು: 10 ದಿನಗಳ ಕಾಲ ಸುರಿದ ಭಾರೀ ಮಳೆ ಕರ್ನಾಟಕವನ್ನೇ ಮುಳುಗಿಸಿದ್ದ ಪ್ರವಾಹದಿಂದ ಉಂಟಾಗಿರುವ ನಷ್ಟ ಬರೋಬ್ಬರೀ 30 ರಿಂದ 40 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಉತ್ತರ ಕರ್ನಾಟಕ, ಹೈದಾರಾಬಾದ್ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ 17 ಜಿಲ್ಲೆಗಳಲ್ಲಿ ಪ್ರಳಯಕ್ಕೆ ಇದುವರೆಗೂ ಆಹುತಿ ಆದವರ ಸಂಖ್ಯೆ 40 ತಲುಪಿದೆ. 14 ಮಂದಿ ಇನ್ನೂ ಕಣ್ಮರೆ ಆಗಿದ್ದಾರೆ. 136 ಪ್ರಮುಖ ಹೆದ್ದಾರಿಗಳು ಹಾಳಾಗಿದ್ದು, 5 ಲಕ್ಷದ 81 ಸಾವಿರ ಮಂದಿಯನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಬೆಳಗಾವಿ ಒಂದರಲ್ಲೇ 3 ಲಕ್ಷದ 45 ಸಾವಿರ ಮಂದಿಯನ್ನ ಶಿಫ್ಟ್ ಮಾಡಲಾಗಿದೆ. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ ತುರ್ತಾಗಿ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ.
ಆಗಸ್ಟ್ 1ರಿಂದ ಸುರಿದಿದ್ದ ಕುಂಭದ್ರೋಣ ಮಳೆ ಉತ್ತರ ಕರ್ನಾಟಕ ಭಾಗದಲ್ಲಿ ತಗ್ಗಿದೆ. ಆದರೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರದಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ.
ಇತ್ತ ಉತ್ತರ ಕರ್ನಾಟಕದಲ್ಲಿ ಪ್ರವಾಹ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದ ಸಿಎಂ ಯಡಿಯೂರಪ್ಪ ಇಂದು ಕರಾವಳಿಗೆ ಹೋಗುತ್ತಿದ್ದಾರೆ. ಬೆಳಗ್ಗೆ 11.30ರಿಂದ ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ, ಬಂಟ್ವಾಳದಲ್ಲಿ ಪ್ರವಾಹ ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅದಾದ ಬಳಿಕ ಸಂಜೆ 6.15ಕ್ಕೆ ನಂಜನಗೂಡು, ಮೈಸೂರಿಗೂ ಭೇಟಿ ನೀಡಲಿದ್ದಾರೆ. ರಾತ್ರಿ 9.15ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.