ಮಹಾರಾಷ್ಟ್ರದಿಂದ ನೀರು ಬಿಡುಗಡೆ: ಒಳ ಹರಿವು ಹೆಚ್ಚಳ ಪ್ರವಾಹ ಭೀತಿಯಲ್ಲಿ ಕೃಷ್ಣಾ ತಟದ ಜನ

ಬೆಳಗಾವಿ: ಮಳೆ ಕಡಿಮೆಯಾಗಿದ್ದರೂ ಕೃಷ್ಣಾ ಹಾಗೂ ಅದರ ಉಪನದಿಗಳ ಒಳ ಹರಿವು ಹೆಚ್ಚಿರುವುದರಿಂದ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ ತಾಲೂಕು ಸೇರಿದಂತೆ ಯಾದಗಿರಿ ಜಿಲ್ಲೆಯಲ್ಲೂ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ನದಿ ತೀರದಲ್ಲಿ ಆತಂಕ ಮುಂದುವರಿದಿದೆ.

ಮಹಾರಾಷ್ಟ್ರದ ಜಲಾಶಯಗಳಿಂದ ಬಿಡುಗಡೆಯಾಗುತ್ತಿರುವ ನೀರಿನಿಂದ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಮಹಾರಾಷ್ಟ್ರದ ರಾಜಾಪೂರ ಜಲಾಶಯದಿಂದ ಸುಮಾರು 3.33 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕೃಷ್ಣಾ ನದಿಗೆ ಸುಮಾರು ನಾಲ್ಕು ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‍ನಿಂದ 3.31 ಲಕ್ಷ ಕ್ಯೂಸೆಕ್, ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ 3.82 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ್‍ಗೆ 4.6 ಲಕ್ಷ ಕ್ಯೂಸೆಕ್ ಹರಿವಿದೆ. ಸಹಜ ಸ್ಥಿತಿಯತ್ತ ಮರಳುತ್ತಿದ್ದ ನದಿ ತೀರದ ಜನರು ಮತ್ತೆ ಪ್ರವಾಹದ ಆತಂಕದಲ್ಲಿದ್ದಾರೆ.

ಜಲಾಶಯಗಳ ನೀರಿನ ಮಟ್ಟ:
ಮಹಾರಾಷ್ಟ್ರದ ಕೋಯ್ನಾ ಜಲಾಶಯದಲ್ಲಿ 90.90 ಟಿಎಂಸಿ ನೀರು ಸಂಗ್ರಹವಿದೆ. 34 ಟಿಎಂಸಿ ನೀರು ಸಾಮಥ್ರ್ಯದ ವಾರಣಾ ಜಲಾಶಯದಲ್ಲಿ 31.37 ಟಿಎಂಸಿ, 25.40 ಟಿಎಂಸಿ ನೀರಿನ ಸಂಗ್ರಹದ ದೂಧ್‍ಗಂಗಾ ಜಲಾಶಯದಲ್ಲಿ 21.39 ಟಿಎಂಸಿ ನೀರು ಇದೆ.

51 ಟಿಎಂಸಿ ಸಾಮಥ್ರ್ಯ ಹೊಂದಿರುವ ರಾಜ್ಯದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘಟಪ್ರಭಾ ಜಲಾಶಯದಲ್ಲಿ 48.82 ಟಿಎಂಸಿ ನೀರು ಸಂಗ್ರಹವಿದೆ.

ಜಲಾಶಯದಿಂದ 33,142 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. 33.73 ಟಿಎಂಸಿ ನೀರಿನ ಸಂಗ್ರಹವಿರುವ ಸವದತ್ತಿ ತಾಲೂಕಿನ ಮಲಪ್ರಭಾ ಜಲಾಶಯದಲ್ಲಿ ಸುಮಾರು 33.73 ಟಿಎಂಸಿ ನೀರು ಸಂಗ್ರಹವಾಗಿದೆ. 7594 ಕ್ಯೂಸೆಕ್ ನೀರು ಬಿಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ