ಶಾಸಕ ಯತ್ನಾಳ್ ವಿರುದ್ಧ ಡಿ.ಕೆ.ಶಿವಕುಮಾರ್ ಮಾನನಷ್ಟ ಮೊಕದ್ದಮೆ

ಬೆಂಗಳೂರು, ಆ.4- ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಕೇಂದ್ರದ ಮಾಜಿ ಸಚಿವ ಬಿಜೆಪಿ ಮುಖಂಡ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ 204 ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಮ್ಮ ತವರು ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಸೀನಿಯರ್ ಸಿವಿಲ್ ಜೆಡ್ಜ್ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ದಾಖಲಿಸಿರುವ ಮಾನನಷ್ಟ ಸಿವಿಲ್ ಮೊಕದ್ದಮೆ (288/2019) ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾಧೀಶರು ಪ್ರತಿ ವಾದಿ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಸೆ.18ಕ್ಕೆ ನಿಗದಿ ಮಾಡಿದ್ದಾರೆ.

ಅರ್ಜಿದಾರರಾದ ಡಿ.ಕೆ.ಶಿವಕುಮಾರ್ ಅವರು ನ್ಯಾಯಾಲಯಕ್ಕೆ ಚೆಕ್ ಮೂಲಕ 1,04,80,000 ರೂ. ಕೋರ್ಟ್ ಶುಲ್ಕ ಪಾವತಿಸಿದ್ದಾರೆ.ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಜೂ.23ರಂದು ವಿಜಯಪುರದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಾ ತಮ್ಮ ಬಗ್ಗೆ ಮಾನಹಾನಿ ಹೇಳಿಕೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ತಮ್ಮ ವಿರುದ್ಧ ದಾಖಲಾಗಿರುವ ತೆರಿಗೆ ಇಲಾಖೆ (ಐಟಿ), ಜಾರಿ ನಿರ್ದೇಶನಾಲಯದ (ಇಡಿ) ಪ್ರಕರಣದಿಂದ ಮುಕ್ತಿಗೊಳಿಸಲು ಸಹಾಯ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರದ ಸಚಿವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ನನ್ನ ವಿರುದ್ಧದ ಪ್ರಕರಣಗಳನ್ನು ಮುಕ್ತಾಯ ಮಾಡಿದರೆ ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮಾಡಲು ನಾನು ವಿರೋಧ ಮಾಡುವುದಿಲ್ಲ ಅಂತ ಭರವಸೆ ನೀಡಿದ್ದಾರೆ ಎಂದು ಯತ್ನಾಳ್ ಅವರು ಈ ಸಂದರ್ಭದಲ್ಲಿ ಸುಳ್ಳು ಆರೋಪ ಮಾಡಿದ್ದಾರೆ.

ಯತ್ನಾಳ್ ಅವರ ಈ ಹೇಳಿಕೆ ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಯತ್ನಾಳ್ ಅವರ ಸತ್ಯಕ್ಕೆ ದೂರವಾದ ಹೇಳಿಕೆಯಿಂದ ತಮ್ಮ ಪ್ರಾಮಾಣಿಕತೆ,ನೈತಿಕತೆ, ಪ್ರತಿಷ್ಠೆ ಹಾಗೂ ವರ್ಚಸ್‍ಗೆ ಧಕ್ಕೆಯಾಗಿದೆ. ಯತ್ನಾಳ್ ಅವರ ಆರೋಪ ಆಧಾರ ರಹಿತ, ದುರುದ್ದೇಶ ಪೂರ್ವಕ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದು, ತಮಗೆ ಮಾನಹಾನಿ ಮಾಡಿದೆ ಎಂದು ಶಿವಕುಮಾರ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರ ವಿರುದ್ಧ ಐಟಿ ಮತ್ತು ಇಡಿ ದಾಖಲು ಮಾಡಿರುವ ಪ್ರಕರಣಗಳ ಸಂಬಂಧ ನಾನಾ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಯತ್ನಾಳ್ ಅವರು ಮಾಡಿರುವ ಈ ಸುಳ್ಳು ಆರೋಪ ಕಾನೂನು ಸಂಸ್ಥೆಗಳ ದಿಕ್ಕು ತಪ್ಪಿಸುವ ಹಾಗೂ ಅವುಗಳ ಮೇಲೆ ಪ್ರಭಾವ ಬೀರುವ ಹುನ್ನಾರದಿಂದ ಕೂಡಿದೆ. ಅಷ್ಟೇ ಅಲ್ಲದೆ ತಾವು ಪ್ರತಿನಿಧಿಸುತ್ತಿರುವ ಕನಕಪುರ ವಿಧಾನಸಭೆ ಕ್ಷೇತ್ರದ ಮತದಾರರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಕರ್ನಾಟಕ ಹಾಗೂ ದೇಶದ ಪ್ರಜೆಗಳು ತಮ್ಮನ್ನು ಅನುಮಾನದಿಂದ ನೋಡುವಂತೆ ಮಾಡಿದೆ.ನನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷ ಹಾಗೂ ಸಾರ್ವಜನಿಕರ ಹಿತ ಬಲಿಕೊಡಲು ಮುಂದಾಗಿದ್ದೇನೆ ಎಂಬ ಭಾವನೆ ಮೂಡುವಂತೆ ಮಾಡಿದೆ.

ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಮ್ಮನ್ನು ಅದೇ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದೇನೆ ಎಂಬ ಅರ್ಥ ಬರುವ ಹೇಳಿಕೆ ನೀಡುವ ಮೂಲಕ ತಮ್ಮ ಪ್ರಾಮಾಣಿಕತೆ, ಬದ್ಧತೆ, ಘನತೆ ಹಾಗೂ ಗೌರವಕ್ಕೆ ಚ್ಯುತಿ ತಂದ್ದಿದಾರೆ ಎಂದು ಡಿ.ಕೆ.ಶಿವಕುಮಾರ್ ಅರ್ಜಿಯಲ್ಲಿ ಆಪಾದಿಸಿದ್ದಾರೆ.

ಯತ್ನಾಳ್ ಮಾಡಿರುವ ಆರೋಪ ಗಂಭೀರವಾಗಿದ್ದು, ಇದು ಕಾಂಗ್ರೆಸ್ ರಾಜ್ಯ, ರಾಷ್ಟ್ರೀಯ ಮುಖಂಡರು, ಮೈತ್ರಿ ಸರ್ಕಾರದ ಮುಖಂಡರು ತಮ್ಮನ್ನು ಅನುಮಾನದಿಂದ ನೋಡಲಿ ಮತ್ತು ತಮ್ಮ ರಾಜಕೀಯ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿ ಎಂಬ ದುರುದ್ದೇಶದಿಂದಲೂ ಕೂಡಿದೆ ಎಂದು ದೂರಿದ್ದಾರೆ.

ಹಿಂದಿನ ಮೈತ್ರಿ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಕೆಲವು ಬಾರಿ ಡೆಲ್ಲಿಗೆ ಭೇಟಿ ನೀಡಿದ್ದು ನಿಜ. ಜೂ.12ರಿಂದ 19ರ ನಡುವೆ ಪ್ರವಾಸ ಮಾಡಿದ್ದಾಗ ಕೇಂದ್ರದ ಕೆಲವು ಸಚಿವರನ್ನು ಭೇಟಿ ಮಾಡಿ ಮಹದಾಯಿ, ಮೇಕೆದಾಟು ಸೇರಿದಂತೆ ಕರ್ನಾಟಕದ ನಾನಾ ಜಲಸಂರಕ್ಷಣೆ, ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಈ ಬೆನ್ನಲ್ಲೇ ಅಂದರೆ ಜೂ.23ರಂದು ಯತ್ನಾಳ್ ಅವರು ಈ ರೀತಿ ಅಪಾರ್ಥದ ಹೇಳಿಕೆ ನೀಡಿರುವುದು ತಮ್ಮ ಕರ್ತವ್ಯ ನಿಷ್ಟೆ ಹಾಗೂ ಗೌರವಕ್ಕೆ ಭಂಗ ತಂದಿದೆ.

ಯತ್ನಾಳ್ ಆರೋಪದಿಂದ ನಮ್ಮ ಕ್ಷೇತ್ರದ ಮತದಾರರು, ಕಾರ್ಯಕರ್ತರು ತಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದ ತಮಗೆ ಮಾನಸಿಕ ಹಿಂಸೆಯಾಗುತ್ತಿದೆ. ಅನಗತ್ಯವಾಗಿ ತಲೆ ತಗ್ಗಿಸುವಂತೆ ಮಾಡಿದೆ ಎಂದು ಶಿವಕುಮಾರ್ ಅಲವತ್ತುಕೊಂಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಯತ್ನಾಳ್ ಅವರಿಂದ 204 ಕೋಟಿ ರೂ.ಪರಿಹಾರ ಕೊಡಿಸಬೇಕು ಹಾಗೂ ಶಾಶ್ವತವಾಗಿ ತಮ್ಮ ವಿರುದ್ಧ ಮಾತಿನ ಹಾಗೂ ಬರಹದ ಸ್ವರೂಪದಲ್ಲಿ ಯಾವುದೇ ಹೇಳಿಕೆ ನೀಡದಂತೆ ಅವರಿಗೆ ನಿರ್ಬಂಧ ಹೇರಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ