ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆ

ಬೆಂಗಳೂರು, ಆ.4- ಸಂಪುಟ ರಚನೆ ಹಗ್ಗಜಗ್ಗಾಟ ಮುಗಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿನ ತಿಂಗಳ ಎರಡನೇ ವಾರದಲ್ಲಿ ಬಿಜೆಪಿ ಸರ್ಕಾರದ ನೂತನ ಬಜೆಟ್ ಮಂಡಿಸಲಿದ್ದಾರೆ.

ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಯಡಿಯೂರಪ್ಪ ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದು, ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕಾರಿಗಳ ಸಭೆಯನ್ನು ನಿರಂತರವಾಗಿ ನಡೆಸುತ್ತಿರುವ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪನ್ಮೂಲಗಳ ಕ್ರೂಢೀಕರಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‍ನಲ್ಲಿ ಖರ್ಚಾಗಿರುವ ಅನುದಾನ, ಹೊಸ ಕಾರ್ಯಕ್ರಮಗಳ ಘೋಷಣೆ ಸೇರಿದಂತೆ ಹೊಸ ಬಜೆಟ್ ಮಂಡನೆಗೆ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಕಲೆ ಹಾಕಿದ್ದಾರೆ.

ಮೂಲಗಳ ಪ್ರಕಾರ ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಯಡಿಯೂರಪ್ಪ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದು, ಸುಮಾರು ಎರಡುವಾರಗಳ ಕಾಲ ಅಧಿವೇಶನ ನಡೆಸಲು ಚಿಂತನೆ ನಡೆಸಿದ್ದಾರೆ.

ಇತ್ತೀಚೆಗೆ ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವೇಳೆ ದೋಸ್ತಿ ಸರ್ಕಾರದ ಬಜೆಟ್‍ಗೆ ಕೇವಲ ಮೂರು ತಿಂಗಳ ಲೇಖಾನುದಾನ ಪಡೆದಿದ್ದರು. ಪೂರ್ಣಾವಧಿಗೆ ಲೇಖಾನುದಾನ ಪಡೆದರೆ ಹೊಸ ಬಜೆಟ್ ಮಂಡಿಸಲು ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಮುಂಜಾಗ್ರತ ಕ್ರಮವಾಗಿ ಕೇವಲ ಮೂರು ತಿಂಗಳ ಅವಧಿಗೆ ಮಾತ್ರ ಸದನದಲ್ಲಿ ಲೇಖಾನುದಾನ ಮಂಡಿಸಿದ್ದರು.

ಇದೀಗ ರಾಜ್ಯದಲ್ಲಿ ತಮ್ಮ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಜನರಿಗೆ ಸರ್ಕಾರದ ಪರ ಹೆಚ್ಚಿನ ಒಲವು ಗಿಟ್ಟಿಸಿಕೊಳ್ಳುವುದು ಹಾಗೂ ಜನರೊಂದಿಗೆ ಸರ್ಕಾರ ಇದೆ ಎಂಬುದನ್ನು ಬಿಂಬಿಸಲು ಯಡಿಯೂರಪ್ಪ ಬಜೆಟ್ ಮಂಡನೆ ಮೂಲಕ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಹೊಸ ಕಾರ್ಯಕ್ರಮಗಳ ಘೋಷಣೆ:
ಇನ್ನು ಯಡಿಯೂರಪ್ಪ ತಮ್ಮ ಬಜೆಟ್‍ನಲ್ಲಿ ದೋಸ್ತಿ ಸರ್ಕಾರದ ಕೆಲವು ಕಾರ್ಯಕ್ರಮಗಳನ್ನು ಮುಂದುವರೆಸಲಿದು, ತಮ್ಮ ಸರ್ಕಾರದ ಕೆಲವು ಹೊಸ ಯೋಜನೆಗಳನ್ನು ಸಹ ಪ್ರಕಟಿಸಲಿದ್ದಾರೆ.

ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು ಹೆಚ್ಚಳ ಮಾಡುವುದು. ಜತೆಗೆ ಉತ್ತರ ಕರ್ನಾಟಕ ಭಾಗದವರಿಗೆ ತೊಗರಿ ಬೇಳೆ, ಮೈಸೂರು ಭಾಗದವರಿಗೆ ರಾಗಿ, ಮಧ್ಯ ಕರ್ನಾಟಕದವರಿಗೆ ಗೋಧಿ ನೀಡುವ ಸಾಧ್ಯತೆ ಇದೆ.

ಈವರೆಗೂ ಪ್ರತಿ ಕುಟುಂಬದ ಸದಸ್ಯರಿಗೆ 5ರಿಂದ 7 ಕೆಜೆ ಅಕ್ಕಿ ನೀಡಲಾಗುತ್ತಿತ್ತು. ಕುಮಾರಸ್ವಾಮಿ ಸಿಎಂ ಆದ ಮೇಲೆ ಇದರ ಪ್ರಮಾಣವನ್ನು 10 ಕೆಜಿಗೆ ಹೆಚ್ಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದರು. ಆದರೆ, ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಿದ ಪರಿಣಾಮ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತದೆ ಎಂಬ ಕಾರಣಕ್ಕಾಗಿ ಅಕ್ಕಿ ಪ್ರಮಾಣವನ್ನು ಏರಿಕೆ ಮಾಡಿರಲಿಲ್ಲ. ಈಗ ಯಡಿಯೂರಪ್ಪ ಬಜೆಟ್‍ನಲ್ಲಿ ಪ್ರತಿ ಕುಟುಂಬದ ಸದಸ್ಯರಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ರೈತ ಸಾಲ ಮನ್ನಾ ಮಾಡಿದ್ದರೂ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದ ಕಾರಣ ಈ ಸಾಲ ಮನ್ನಾ ಮಾಡಲು ತಡೆ ಉಂಟಾಗಿತ್ತು. ಇದೀಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಎಷ್ಟು ಪ್ರಮಾಣದಲ್ಲಿ ಸಾಲ ಪಡೆದಿದ್ದಾರೆ ಎಂಬುದನ್ನು ಅಧಿಕಾರಿಗಳಿಂದ ಯಡಿಯೂರಪ್ಪ ಮಾಹಿತಿ ಕಲೆ ಹಾಕಿದ್ದಾರೆ.

ಹಿಂದಿನ ಸರ್ಕಾರ 50ಸಾವಿರವರೆಗಿನ ಸಾಲ ಮನ್ನಾ ಮಾಡಿತ್ತು.ಇದೀಗ ಯಡಿಯೂರಪ್ಪ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದಿರುವ 75ಸಾವಿರದಿಂದ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವ ಯೋಜನೆ ಪ್ರಕಟಿಸಲಿದ್ದಾರೆ. ಸುಮಾರು ಒಂದು ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಗುರಿ ಹೊಂದಿದ್ದಾರೆ.

2008ರಲ್ಲಿ ಸಿಎಂ ಆದ ವೇಳೆ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್‍ನ ಮೊತ್ತವನ್ನು ಹೆಚ್ಚಳ ಮಾಡಲಿದ್ದಾರೆ. ಈವರೆಗೂ ಈ ಯೋಜನೆಯ ಲಾಭ ಬಿಪಿಎಲ್ ಕುಟುಂಬದವರೆಗೆ ಮಾತ್ರ ಇತ್ತು. ಇದನ್ನು ಎಪಿಎಲ್ ಕುಟುಂಬದವರಿಗೂ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಇದೇ ರೀತಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆಪಿಂಚಣಿ ವೇತನ ಹೆಚ್ಚಳ, ವಿಧವೆಯರಿಗೆ ನೀಡುತ್ತಿರುವ ಮಾಶಾಸನವನ್ನು ಏರಿಕೆ ಮಾಡುವುದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‍ಗಳ ಸುಧಾರಣೆಗಾಗಿ ವಿಶೇಷ ಆರ್ಥಿಕ ನೆರವು ಘೋಷಣೆ. ಅಲ್ಪಸಂಖ್ಯಾತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತ್ಯೇಕ ಹಾಸ್ಟೇಲ್ ನಿರ್ಮಾಣ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶೇಷ ಅನುದಾನವನ್ನು ಘೋಷಣೆ ಮಾಡಲಿದ್ದಾರೆ.

ತಮ್ಮದು ರೈತ ಪರ ಸರ್ಕಾರ ಎಂಬುದನ್ನು ಬಿಂಬಿಸಿಕೊಳ್ಳಲು ಕಸರತ್ತು ನಡೆಸಿರುವ ಯಡಿಯೂರಪ್ಪ ಈಗಾಗಲೇ ನೇಕಾರರ 100 ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಜತೆಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ 6ಸಾವಿರ ಮೊತ್ತದ ಜತೆಗೆ ರಾಜ್ಯ ಸರ್ಕಾರ ಎರಡು ಕಂತಿನಲ್ಲಿ 4 ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಲಾಗಿದೆ. ತಾವು ಮಂಡಿಸಿರುವ ಬಜೆಟ್‍ನಲ್ಲಿ ರೈತರಿಗಾಗಿ ವಿಶೇಷ ಯೋಜನೆಗಳನ್ನು ಪ್ರಕಟಿಸಲಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ 6 ಗಂಟೆ ವಿದ್ಯುತ್ ಪೂರೈಕೆ ಮಾಡುವುದು, ವಿದ್ಯುತ್ ಸೋರಿಕೆ ತಡೆಗಟ್ಟಲು ಬಿಗಿಯಾದ ಕ್ರಮ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಆಧುನಿಕ ಕೃಷಿ ಮಾರುಕಟ್ಟೆ ವ್ಯವಸ್ಥೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರೈತರು ನೇರವಾಗಿ ಬೆಳೆಗಳನ್ನು ಮಾರಾಟ ಮಾಡುವ ವ್ಯವಸ್ಥೆ, ಎಪಿಎಂಸಿಗಳ ಸುಧಾರಣೆ ಸೇರಿದಂತೆ ಅನ್ನದಾತನ ಕಣ್ಣೀರೊರೆಸಲು ಕೆಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದ್ದಾರೆ.

ಮಹಾನಗರ ಪಾಲಿಕೆಗಳ ಸುಧಾರಣೆಗೆ ವಿಶೇಷ ಒತ್ತು ನೀಡಲಿದ್ದು, ಕೆಲವು ಮಹಾನಗರ ಪಾಲಿಕೆ, ನಗರ ಪಾಲಿಕೆ, ಜಿಪಂ, ತಾಪಂ ಹಾಗೂ ಗ್ರಾಪಂಗಳ ಸುಧಾರಣೆಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಲಿದೆ.

ಪ್ರತಿಯೊಂದು ಹಳ್ಳಿಯಲ್ಲೂ ಎಲ್ಲಾ ನಾಗರಿಕರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಘಟಕಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಿದ್ದಾರೆ. ಅಲ್ಲದೆ ಇವುಗಳ ನಿರ್ವಹಣೆಗೆ ಆರ್ಥಿಕ ನೆರವು ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹೀಗೆ ತಮ್ಮ ಸರ್ಕಾರ ಜನಪರವಾಗಿದೆ ಎಂಬುದನ್ನು ಬಿಂಬಿಸಲು ಮುಂದಾಗಿರುವ ಯಡಿಯೂರಪ್ಪ ಬಜೆಟ್‍ನಲ್ಲಿ ಬರಪೂರ ಕೊಡುಗೆಗಳನ್ನು ನೀಡುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ