ಕಾಂಗ್ರೆಸ್‍ಗೆ ಶಿವಾಜಿನಗರದಲ್ಲಿ ಯಾರನ್ನು ಕಣಕ್ಕಿಳಿಸುವಬೇಕೆಂಬ ವಿಷಯದಲ್ಲಿ ಗೊಂದಲ

ಬೆಂಗಳೂರು, ಆ.4- ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್‍ಗೆ ತೀವ್ರತಲೆನೋವಾಗಿದೆ.

ಬಹುತೇಕ ಕ್ಷೇತ್ರಗಳಲ್ಲಿ ಪಕ್ಷ ನಿಷ್ಟರೆಂದು ನಂಬಿ ಶಾಸಕರನ್ನು ಮುಂಚೂಣಿಗೆ ಬಿಟ್ಟಿದ್ದ ಕಾಂಗ್ರೆಸ್‍ಗೆ ಏಕಾಏಕಿ ತಬ್ಬಿಬ್ಬಾಗುವ ಪರಿಸ್ಥಿತಿ ಎದುರಾಗಿದೆ.

17 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಮಾಡಿರುವ ಕಾಂಗ್ರೆಸ್‍ಗೆ ಶಿವಾಜಿನಗರದಲ್ಲಿ ಯಾರನ್ನು ಕಣಕ್ಕಿಳಿಸುವಬೇಕೆಂಬ ವಿಷಯದಲ್ಲಿ ಗೊಂದಲಕ್ಕೆ ಸಿಲುಕಿದೆ.

ವಿಧಾನಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಸಿ.ಎಂ. ಇಬ್ರಾಹಿಂ, ನಜೀರ್ ಅಹಮ್ಮದ್ ಸೇರಿದಂತೆ ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಸ್ಥಳೀಯವಾಗಿ ಎರಡನೇ ಹಂತದ ನಾಯಕತ್ವಕ್ಕೆ ಕ್ಷೇತ್ರದಲ್ಲಿ ಈವರೆಗೂ ಅವಕಾಶವೇ ಇರಲಿಲ್ಲ. ಹೀಗಾಗಿ ರೋಷನ್ ಬೇಗ್ ಅವರನ್ನು ಸೋಲಿಸಬೇಕಾದರೆ ಅತ್ಯಂತ ಪ್ರಬಲ ನಾಯಕ ಬೇಕು. ಆದರೆ, ಪ್ರಸ್ತುತ ಈ ಕ್ಷೇತ್ರದಲಿ ಅಂತಹ ನಾಯಕರ ಕೊರತೆ ಇದೆ. ಇದು ಪಕ್ಷಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಬೆಂಗಳೂರಿನ ನಾಲ್ಕೂ ಕ್ಷೇತ್ರಗಳಲ್ಲಿ ನಾಲ್ಕನ್ನೂ ಮತ್ತೆ ಗೆದ್ದುಕೊಳ್ಳಬೇಕು ಎಂಬ ಕಾಂಗ್ರೆಸ್‍ನ ಲೆಕ್ಕಾಚಾರಗಳು ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ತೊಡಕಾಗಿದೆ.

ಮಹಾಲಕ್ಷ್ಮೀಲೇಔಟ್‍ಗೆ ಬಿಬಿಎಂಪಿ ಸದಸ್ಯ ಶಿವರಾಜ್, ಮಾಜಿ ಶಾಸಕ ಮಾಗಡಿ ಬಾಲಕೃಷ್ಣ, ಎನ್‍ಎಸ್‍ಯುಐ ಅಧ್ಯಕ್ಷ ಮಂಜುನಾಥ್, ಗಿರೀಶ್ ಕೆ.ನಾಶಿ, ಯಶವಂತಪುರಕ್ಕೆ ಪ್ರಿಯಾಕೃಷ್ಣ, ಕೆ.ಆರ್.ಪುರಂಗೆ ಉದಯ್‍ಕುಮಾರ್ ರೆಡ್ಡಿ, ಧನಂಜಯ್ಯ, ನಾರಾಯಣಸ್ವಾಮಿ, ಆರ್.ಆರ್.ನಗರಕ್ಕೆ ಹನುಮಂತರಾಯಪ್ಪ, ರಾಜ್‍ಕುಮಾರ್ ಅವರುಗಳು ಆಕಾಂಕ್ಷಿಗಳಾಗಿದ್ದಾರೆ.

ಶುಕ್ರವಾರದಿಂದ ಕಾಂಗ್ರೆಸ್ ಕ್ಷೇತ್ರಗಳಿಗೆ ವೀಕ್ಷಕರನ್ನು ರವಾನಿಸಿದ್ದು, ಅಭ್ಯರ್ಥಿಗಳ ಆಯ್ಕೆ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತಲೂ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಹೆಚ್ಚು ಉಪ ಚುನಾವಣೆಗಳು ನಡೆಯುತ್ತಿದ್ದು, ಈ ಭಾಗದಲ್ಲಿ ಶತಾಯಗತಾಯ ಗೆದ್ದು ಪಕ್ಷಕ್ಕೆ ಅನ್ಯಾಯ ಮಾಡಿದವರನ್ನು ಮೂಲೆಗುಂಪು ಮಾಡಲೇಬೇಕೆಂದು ಕಾಂಗ್ರೆಸ್ ನಾಯಕರು ಹಠಕ್ಕೆ ಬಿದ್ದಿದ್ದಾರೆ.

ಆದರೆ, ಈಗಾಗಲೇ ಪ್ರಬಲವಾಗಿ ಬೆಳೆದು ನಿಂತಿರುವ ಅನರ್ಹ ಶಾಸಕರ ವಿರುದ್ಧ ಕಾಂಗ್ರೆಸ್‍ನ ಹುರಿಯಾಳುಗಳ ಹೋರಾಟ ಎಷ್ಟರ ಮಟ್ಟಿಗೆ ಯಶಸ್ವಿ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ