ಕಾಂಗ್ರೆಸ್ ಕಡೆ ತಿರುಗಿ ನೋಡುವುದಿಲ್ಲ-ಅನರ್ಹ ಶಾಸಕ ಬಿ.ಸಿ.ಪಾಟೀಲ್

ಬೆಂಗಳೂರು, ಆ.4- ಯಾವುದೇ ಕಾರಣಕ್ಕೂ ನಾನು ಪುನಃ ಕಾಂಗ್ರೆಸ್ ಕಡೆ ತಿರುಗಿ ನೋಡುವುದಿಲ್ಲ. ಬಿಜೆಪಿ ಸೇರ್ಪಡೆ ಬಗ್ಗೆ ಕ್ಷೇತ್ರದ ಮತದಾರರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅನರ್ಹಹೊಂಡಿರುವ ಹಿರೇಕೆರೂರಿನ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಡಾಲರ್ಸ್‍ಕಾಲೋನಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಮಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಕಡೆ ತಿರುಗಿ ನೋಡುವುದಿಲ್ಲ, ಅದು ಕನಸಿನ ಮಾತು. ನಮ್ಮನ್ನು ರಾಜಕೀಯವಾಗಿ ಮುಗಿಸಿದವರ ಜತೆ ಪುನಃ ಕೈ ಜೋಡಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಸೇರ್ಪಡೆ ಕುರಿತಂತೆ ನನ್ನ ಕ್ಷೇತ್ರದ ಮತದಾರರ ಜತೆ ಚರ್ಚೆ ಮಾಡುತ್ತೇನೆ. ಕಾರ್ಯಕರ್ತರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ.ಬಿಜೆಪಿ ಯಿಂದಲೇ ಸ್ಪರ್ಧಿಸಿ ಎಂದು ಒತ್ತಡಹಾಕಿದರೂ ಕಮಲದ ಚಿನ್ನೆಯಡಿ ಸ್ಪರ್ಧಿಸಲು ಸಿದ್ದ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಏನು ಮಾಡುತ್ತಿದ್ದಾರೆ ಎಂಬುದು ನನಗೂ ಗೊತ್ತು. ಹಾಗೆಂದು ನಾವೇನು ಕೈ ಕಟ್ಟಿ ಕೂರುವುದಿಲ್ಲ. ತಂತ್ರಕ್ಕೆ ಪ್ರತಿ ತಂತ್ರ ರೂಪಿಸುವುದು ನಮಗೂ ಗೊತ್ತಿದೆ. ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ನಾವೇನೂ ಹಣಕ್ಕೆ ಮಾರಾಟವಾಗಿಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ನಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಅವರಿಂದ ಇಂತಹ ತೀರ್ಮಾನವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಅನರ್ಹಗೊಳಿಸಿರಬಹುದು. ನ್ಯಾಯಾಲಯದಲ್ಲಿ ನಮಗೆ ಜಯ ಸಿಗದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸ್ಪೀಕರ್ ನಮ್ಮನ್ನು ಸದಸ್ಯತ್ವದಿಂದ ಅನರ್ಹ ಮಾಡಿರಬಹುದು. ಆದರೆ ಮತದಾರರು ನಮ್ಮನ್ನು ಅರ್ಹರನ್ನಾಗಿ ಮಾಡುತ್ತಾರೆ. ಈಗಲೇ ನಾನು ಸ್ಪರ್ಧಿಸಿದರೂ ಗೆದ್ದೇ ಗೆಲ್ಲುತ್ತೇನೆ ಅದರಲ್ಲಿ ಯಾವ ಅನುಮಾನ ಬೇಡ ಎಂದರು.

ಹಿರೇಕೆರೂರು ತಾಲ್ಲೂಕು ಅಭಿವೃದ್ಧಿ ಕುರಿತಂತೆ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಕೆಲವು ಯೋಜನೆಗಳು ಅನುಷ್ಠಾನವಾಗಬೇಕು ಹಾಗಾಗಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೆ. ಶೀಘ್ರದಲ್ಲೇ ಬಾಕಿ ಉಳಿದಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸುವ ವೇಳೆ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಹಾಗಾಗಿ ಈಗ ಭೇಟಿ ಮಾಡಿ ಶುಭ ಕೋರಿದ್ದೇನೆ. ಇದಕ್ಕೆ ಯಾವುದೇ ವಿಶೇಷ ರಾಜಕೀಯ ಅರ್ಥ ಕಲ್ಪಿಸಬೇಡಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ