ಶ್ರೀನಗರ, ಆ.3– ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ.
ನಿನ್ನೆಯಷ್ಟೇ ಜಮ್ಮು-ಕಾಶ್ಮೀರ ಶೋಪಿಯಾನ್‍ನಲ್ಲಿ ಭಯೋತ್ಪಾದಕನೊಬ್ಬನ ಹೆಡೆಮುರಿ ಕಟ್ಟಿದ್ದ ಭಾರತೀಯ ಯೋಧರು ಇಂದು ಸಪೊರ್‍ನಲ್ಲಿ ಮತ್ತೊಬ್ಬ ಉಗ್ರಗಾಮಿಯನ್ನು ಹೊಡೆದುರುಳಿಸಿದ್ಧಾರೆ.
ಬಾರಾಮುಲ್ಲಾ ಜಿಲ್ಲೆಯಲ್ಲಿ ಸಪೊರ್ ಪಟ್ಟಣದ ವಾರ್‍ಪೆಪೊರ್ ಪ್ರದೇಶದಲ್ಲಿ ನಡೆದ ಈ ಗುಂಡಿನ ಚಕಮಕಿಯಲ್ಲಿ ಇನ್ನೂ ಕೆಲವು ಉಗ್ರರಿಗೆ ಗಾಯಗಳಾಗಿವೆ ಎಂದು ಹಿರಿಯ ಸೇನಾಧಿಕಾರಿು ತಿಳಿಸಿದ್ದಾರೆ.
ಈ ಪ್ರದೇಶದ ನಿರ್ಜನ ಸ್ಥಳದಲ್ಲಿ ಪಾಕಿಸ್ತಾನಿ ಬೆಂಬಲಿತ ಉಗ್ರರು ಅವಿತಿಟ್ಟುಕೊಂಡು ವಿಧ್ವಂಸಕ ಕೃತ್ಯಕ್ಕೆ ಕುತಂತ್ರ ರೂಪಿಸಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆಗೆ ಯೋಧರು ನಿನ್ನೆ ತಡ ರಾತ್ರಿಯಿಂದಲೇ ಆ ಪ್ರದೇಶ ಸುತ್ತುವರೆದು ತೀವ್ರ ಶೋಧ ನಡೆಸುತ್ತಿದ್ದರು.
ಇಂದು ಮುಂಜಾನೆ ಯೋಧರು ತಮ್ಮ ಬಳಿ ಬರುತ್ತಿರುವುದನ್ನು ಗಮನಿಸಿದ ಉಗ್ರರು ಗುಂಡು ಹಾರಿಸಿದರು. ಭದ್ರತಾ ಪಡೆಗಳೂ ಸಹ ಪ್ರತಿಯಾಗಿ ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು.
ಈ ಗುಂಡಿನ ಕಾಳಗದಲ್ಲಿ ಭಯೋತ್ಪಾದಕನೊಬ್ಬ ಹತನಾದ. ಮೃತನ ಬಳಿ ಇದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಮಿಲಿಟರಿ ಅಧಿಕಾರಿ ಹೇಳಿದ್ದಾರೆ.
ಗುಂಡಿನ ಚಕಮಕಿ ವೇಳೆ ಕೆಲವು ಉಗ್ರರಿಗೂ ಗಾಯಗಳಾಗಿರುವ ಸಾಧ್ಯತೆ ಇದ್ದು, ಪರಾರಿಯಾಗಿದ್ದಾರೆ. ಆತಂಕವಾದಿಗಳಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.