ಯಾವುದೇ ಕಾರಣಕ್ಕೂ ನೌಕರರ ವೇತನ ವಿಳಂಬವಾಗಬಾರದು-ಮಾಳವಿಕ ಸಿದ್ದಾರ್ಥ್

ಬೆಂಗಳೂರು, ಆ.3- ಸಿದ್ಧಾರ್ಥ್ ಅವರ ಮಹತ್ವಾಕಾಂಕ್ಷೆಯ ಕೆಫೆ ಕಾಫಿ ಡೇ, ಎಬಿಸಿ ಕಂಪೆನಿ ಸಿಬ್ಬಂದಿ ನೌಕರರ ವೇತನ ಎಂದಿನಂತೆ ಪಾವತಿಯಾಗಲಿದೆ.

ಕೆಫೆ ಕಾಫಿ ಡೇ ಮಾಲೀಕರಾದ ಸಿದ್ಧಾರ್ಥ್ ಅವರು ನಿಧನರಾದ ಹಿನ್ನೆಲೆಯಲ್ಲಿ ಸಾವಿರಾರು ಕೆಫೆ ಕಾಫಿ ಡೇ ಸೇರಿದಂತೆ ಹಲವು ಸಂಸ್ಥೆಗಳ ನೌಕರರು ಆತಂಕಕ್ಕೊಳಗಾಗಿದ್ದರು. ಆದರೆ, ಸಿದ್ಧಾರ್ಥ್ ಅವರ ಪತ್ನಿ ಕೆಫೆ ಕಾಫಿ ಡೇ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ನೌಕರರ ವೇತನ ವಿಳಂಬವಾಗಬಾರದು. ತಿಂಗಳ ಮೊದಲ ವಾರದಲ್ಲಿ ಎಂದಿನಂತೆ ಅವರಿಗೆ ಸಂಬಳ ಪಾವತಿಯಾಗುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ಸಿದ್ಧಾರ್ಥ್ ಅವರು ಮಹತ್ವಾಕಾಂಕ್ಷೆಯಿಂದ ಕೆಫೆ ಕಾಫಿ ಡೇ ಸಂಸ್ಥೆಯನ್ನು ಸ್ಥಾಪಿಸಿದ್ದರು. ರಾಜ್ಯದಲ್ಲಷ್ಟೇ ಅಲ್ಲ, ದೇಶದ ವಿವಿಧೆಡೆ ವಿದೇಶದಲ್ಲೂ ಇದರ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ನಾಡಿನ ಅದರಲ್ಲೂ ತೀರ ಹಿಂದುಳಿದ ಪ್ರದೇಶಗಳಿಂದ ಬಂದಂತಹ ಯುವಕ-ಯುವತಿಯರಿಗೆ ಕೆಫೆ ಕಾಫಿ ಡೇನಲ್ಲಿ ನೌಕರಿ ಕೊಟ್ಟು ಉತ್ತಮ ಸಂಬಳವನ್ನೂ ಕೊಡುತ್ತಿದ್ದರು.

ಸಾವಿರಾರು ಯುವಕ-ಯುವತಿಯರು ಇದರಿಂದ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಅವರ ನಿಧನದಿಂದ ತಮ್ಮ ಭವಿಷ್ಯ ಏನಾಗುತ್ತದೋ ಎಂದು ಆತಂಕಕ್ಕೊಳಗಾಗಿದ್ದು, ಸಿದ್ಧಾರ್ಥ್ ಅವರ ಪತ್ನಿ ಮಾಳವಿಕ ಅವರು ಇಂದು ಕೆಫೆ ಕಾಫಿ ಡೇ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಯಾವುದೇ ಕಾರಣಕ್ಕೂ ಸಿದ್ಧಾರ್ಥ್ ಅವರ ಕನಸು ಭಗ್ನವಾಗಲು ಅವಕಾಶ ಕೊಡುವುದು ಬೇಡ ಎಂದು ಹೇಳಿದ್ದಾರೆ.

ಕೆಫೆ ಕಾಫಿ ಡೇ ಆಗಲಿ, ಎಬಿಸಿ ಕಂಪೆನಿಯಾಗಲಿ ಯಾವುದೇ ಸಂಸ್ಥೆಯ ನೌಕರರಿಗೂ ಸಂಬಳ ವಿಳಂಬವಾಗಬಾರದು ಎಂಬ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಮತ್ತಷ್ಟು ಹುರುಪು ಬಂದಂತಾಗಿದೆ.

ತಮ್ಮ ಮಾಲೀಕರಾದ ಸಿದ್ಧಾರ್ಥ್ ಅವರ ಕನಸನ್ನು ಸಾಕಾರಗೊಳಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ದುಡಿಮೆ ಮಾಡುವುದಾಗಿ ಅವರು ಪಣ ತೊಟ್ಟಿದ್ದಾರೆ. ಅವರ ವೈಯಕ್ತಿಕ ವ್ಯವಹಾರಗಳೇನಿದ್ದವೋ ಗೊತ್ತಿಲ್ಲ. ಆದರೆ, ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಜನಕ್ಕೆ ಕೆಲಸ ಕೊಟ್ಟು ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಂತಹ ಪುಣ್ಯಾತ್ಮನ ಅಂತ್ಯ ಈ ರೀತಿ ಆಯಿತು.

ಆದರೂ ಅವರು ಕಟ್ಟಿರುವ ಸಂಸ್ಥೆಗಳಲ್ಲಿ ನಮಗೆ ದುಡಿಯಲು ಅವಕಾಶವಿದೆ. ಅದನ್ನು ನಾವು ಮುಂದುವರಿಸುತ್ತೇವೆ. ನಾಡಿನಲ್ಲಿ ಅವರ ಹೆಸರನ್ನು ಉಳಿಸುತ್ತೇವೆ ಎಂದು ಸಿಬ್ಬಂದಿಗಳು ಹೇಳುತ್ತಾರೆ. ಇದಕ್ಕೆ ಅವರ ಶ್ರೀಮತಿ ಅವರು ಕೂಡ ಬೆಂಬಲಕ್ಕೆ ನಿಂತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ